ಬೆಂಗಳೂರು: ನಗರದ ಪೀಣ್ಯ ದಾಸರಹಳ್ಳಿ ಮತ್ತು ಜಗಜೀವನ್‌ರಾಮ್ ನಗರಗಳಲ್ಲಿ ಗುರುವಾರ ಸಂಭವಿಸಿದ ಸಿಲಿಂಡರ್ ಸ್ಫೋಟಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಮಕ್ಕಳು ಸೇರಿದಂತೆ 14 ಮಂದಿ ಗಾಯಗೊಂಡಿದ್ದಾರೆ.
ಪೀಣ್ಯ ದಾಸರಹಳ್ಳಿ ಬಳಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಪಾವಗಡ ಮೂಲದ ದೇವರಾಜ್ (35), ಲಕ್ಷ್ಮಮ್ಮ (35), ನಿರಂಜನ (9), ದೇವಿಕಾ (4), ಸಂಗೀತಾ (16) ಸೋಮಶೇಖರ್ (16), ಮಹೇಶ್ವರಮ್ಮ (35), ಹೊನ್ನೂರಪ್ಪ, (55) ಹಾಗೂ ವೆಂಕಟೇಶ್ (38) ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇವರಾಜ್ ಮತ್ತು ಲಕ್ಷ್ಮಮ್ಮ ಕೆಲ ವರ್ಷಗಳಿಂದ ದಾಸರಹಳ್ಳಿಯ ಕಲ್ಯಾಣ ನಗರದಲ್ಲಿ ನೆಲೆಸಿದ್ದಾರೆ. ಖಾಸಗಿ ಕಂಪನಿಯ ಭದ್ರತಾ ಸಿಬ್ಬಂದಿಯಾಗಿರುವ ದೇವರಾಜ್ ಮನೆಗೆ ಮಕ್ಕಳೊಂದಿಗೆ ಸಂಬಂಧಿಕರು ಬಂದಿದ್ದರು. ಅಪರೂಪದ ನೆಂಟರಿಗೆ ಲಕ್ಷ್ಮಮ್ಮ ಭೂರಿ ಭೋಜನ ಮಾಡಿದ್ದರು. ಸಂಬಂಧಿಕರೊಂದಿಗೆ ಸಂಭ್ರಮದಲ್ಲಿದ್ದ ಅವರು ರಾತ್ರಿ ಗ್ಯಾಸ್ ಸಿಲಿಂಡರ್ ಆರಿಸುವುದನ್ನು ಮರೆತಿದ್ದಾರೆ. ಕೆಲಸ ಮುಗಿಸಿಕೊಂಡು ಬಂದ ದೇವರಾಜ್ ಬಾಗಿಲು ಬಡಿದಾಗ.
ಲಕ್ಷ್ಮಮ್ಮ ಬಾಗಿಲು ತೆರೆಯಲು ಲೈಟ್ ಆನ್ ಮಾಡಿದ್ದಾರೆ. ಈ ವೇಳೆ ಅವಘಡ ಸಂಭವಿಸಿದೆ. ಎಲ್ಲರಿಗೂ ಸುಟ್ಟಗಾಯಗಳಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನಾಲ್ಕು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಬಾಗಲಗುಂಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಸೂತಿ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ: ಜೆ.ಜೆ.ನಗರದಲ್ಲಿ ಸಿಲಿಂಡರ್ ಸ್ಫೋಟಗೊಂಡು ಐದು ಮಂದಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದಾರೆ. ಜೆ.ಜೆ.ನಗರದ ಅರ್ಪತ್ ನಗರದಲ್ಲಿ ಸೋಹಿಲ್ ಎಂಬುವರು ಬಟ್ಟೆ ಕಸೂತಿ ಅಂಗಡಿ ನಡೆಸುತ್ತಿದ್ದು, ನಾಲ್ವರು ಕಾರ್ಮಿಕರಿದ್ದರು. ಗುರುವಾರ ಸಂಜೆ ಅಂಗಡಿ ಆವರಣದಲ್ಲಿದ್ದ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಸೋಹಿಲ್ ಸೇರಿದಂತೆ ಆರು ಮಂದಿಗೆ ಗಂಭೀರ ಗಾಯಗಳಾಗಿವೆ. ಜೆ.ಜೆ.ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.