ಬೆಂಗಳೂರು: ಸರ್ಕಾರ ಪತನಗೊಂಡ ಬೆನ್ನಲ್ಲೇ ದೂರ ದೂರ ಸರಿಯಲಾರಂಭಿಸಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮುಂಬರುವ ಉಪಚುನಾವಣೆಯಲ್ಲಿ ಪ್ರತ್ಯೇಕವಾಗಿ ಸೆಣಸಲು ಮುಂದಾಗಿರುವುದು ಬಹುತೇಕ ಖಚಿತವಾಗಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಗುರುವಾರ ನಾಯಕರ ಸಭೆ ನಡೆದಿದ್ದು, ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುವ ಬಗ್ಗೆ ಬಹುತೇಕ ನಾಯಕರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಸರ್ಕಾರದ ಪತನಕ್ಕೆ ಕಾರಣರಾದ ಶಾಸಕರ ಕ್ಷೇತ್ರದಲ್ಲಿ ಮತ್ತೆ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಲು ನಿರ್ಧರಿಸಿದ್ದು, ಹದಿನೇಳು ಕ್ಷೇತ್ರಗಳಲ್ಲಿ ವಸ್ತು ಸ್ಥಿತಿ ತಿಳಿಯಲು ಹಿರಿಯ ನಾಯಕರ ನೇತೃತ್ವದಲ್ಲಿ ವೀಕ್ಷಕರ ತಂಡ ರಚನೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಜೆಡಿಎಸ್ ಜೊತೆ ಮೈತ್ರಿ ಕಡಿದುಕೊಂಡು ಸ್ವತಂತ್ರವಾಗಿ ಸ್ಪರ್ಧಿಸಲು ಆಸಕ್ತಿ ವಹಿಸಿರುವ ಕಾಂಗ್ರೆಸ್ ನಾಯಕರು ಉಪ ಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸುವ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ.
ಜೆಡಿಎಸ್‌ನಲ್ಲೂ ಏಕಾಂಗಿ ಮಾತು: ದೇವೇಗೌಡರ ನೇತೃತ್ವದಲ್ಲಿ ನಡೆದ ಉಪ ಚುನಾವಣೆ ಸಿದ್ಧತಾ ಸಭೆಯಲ್ಲಿ ಏಕಾಂಗಿಯಾಗಿಯೇ ಹೋಗೋಣ ಎಂದು ಸ್ಥಳೀಯ ಮಟ್ಟದ ಕಾರ್ಯಕರ್ತರು ಹಾಗೂ ಮುಖಂಡರು ವಾದ ಮಂಡಿಸಿದ್ದಾರೆ.
ಜೆಡಿಎಸ್ ವರಿಷ್ಠ ದೇವೇಗೌಡರು ಸಹ, ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ನಡೆ ಏನು ಎಂಬುದು ಕಾದು ನೋಡಿ ಆ ನಂತರ ತೀರ್ಮಾನ ಕೈಗೊಳ್ಳುವ ಮನಸ್ಸಿನಲ್ಲಿದ್ದಾರೆ.
Advertisement
ರಾಜ್ಯ ವಿಧಾನಸಭೆಯ ಹದಿನೇಳು ಶಾಸಕರು ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಉಪ ಚುನಾವಣೆ ಎದುರಿಸಲು ಮೂರೂ ಪಕ್ಷಗಳು ಆಗಲೇ ಸಿದ್ಧತೆ ಆರಂಭಿಸಿವೆ. ಸಮ್ಮಿಶ್ರ ಸರ್ಕಾರ ರಚನೆ, ಲೋಕಸಭೆ ಮೈತ್ರಿ ಮಾಡಿಕೊಂಡು ಕೈ ಸುಟ್ಟುಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಉಪ ಚುನಾವಣೆಯಲ್ಲಿ ಏಕಾಂಗಿಯಾಗಿ ಸೆಣಸಲು ಎರಡೂ ಪಕ್ಷಗಳಲ್ಲೂ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಎರಡೂ ಪಕ್ಷಗಳು ಎಲ್ಲ ಕ್ಷೇತ್ರಗಳಲ್ಲೂ ಪರ್ಯಾಯ ಅಭ್ಯರ್ಥಿಗಳ ಹುಡುಕಾಟ ನಡೆಸಿವೆ.
Related Articles
Advertisement
ಬಿಜೆಪಿಯಲ್ಲೂ ತಯಾರಿ: ಬಿಜೆಪಿಯು ಅಭ್ಯರ್ಥಿ ಯಾರು ಎಂಬ ಬಗ್ಗೆ ತಲೆಕೆಡಿಸಿಕೊಳ್ಳದೆ ಆ ಎಲ್ಲ ಕ್ಷೇತ್ರದಲ್ಲಿ ಚುನಾವಣೆಗೆ ಸಜ್ಜಾಗಲು ಕಾರ್ಯಕರ್ತರು ಹಾಗೂ ಮುಖಂಡರಿಗೆ ಸೂಚನೆ ನೀಡಿದೆ.
ಜತೆಗೆ ಬಿಜೆಪಿ ನಾಯಕರು ಆಂತರಿಕವಾಗಿ ಉಪ ಚುನಾವಣೆ ಕುರಿತು ಚರ್ಚೆ ನಡೆಸಿದ್ದಾರೆ. ಅಧಿಕೃತವಾಗಿ ಸಭೆ ನಡೆಸಿದರೆ ಅಭ್ಯರ್ಥಿಗಳ ಹೆಸರು ಪ್ರಸ್ತಾಪವಾಗಬೇಕಾಗುತ್ತದೆ. ಆದರೆ, ಅನರ್ಹ ಗೊಂಡಿರುವ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡುವ ಅಥವಾ ಅವರು ಸೂಚಿಸಿದವರಿಗೆ ಟಿಕೆಟ್ ನೀಡುವ ಭರವಸೆ ನೀಡಿರುವುದರಿಂದ ಸದ್ಯಕ್ಕೆ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಯೋಚಿಸದೆ ಆಯಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ಎದುರಾದರೆ ಗೆಲ್ಲಲು ಅನುಸರಿಸಬೇಕಾದ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಸುಪ್ರೀಂಕೋರ್ಟ್‌ನಲ್ಲಿ ಸ್ಪೀಕರ್ ಆದೇಶ ಪ್ರಶ್ನೆ
ನವದೆಹಲಿ: ಅನರ್ಹತೆಗೆ ಒಳಗಾಗಿರುವ ಕರ್ನಾಟಕದ ಕಾಂಗ್ರೆಸ್ ಮತ್ತು ಜೆಡಿಎಸ್‌ನ 14 ಶಾಸಕರು ಗುರುವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ವಿಧಾನಸಭೆ ಸ್ಪೀಕರ್ ಆಗಿದ್ದ ಕೆ.ಆರ್.ರಮೇಶ್ ಕುಮಾರ್ ಅವರು ತಮ್ಮನ್ನು ಅನರ್ಹಗೊಳಿಸಿ ನೀಡಿದ ಆದೇಶ ಪ್ರಶ್ನೆ ಮಾಡಿ ಈ ಅತೃಪ್ತ ಶಾಸಕರು ಮೊಕದ್ದಮೆ ಹೂಡಿದ್ದಾರೆ. ಎಚ್.ವಿಶ್ವನಾಥ್ (ಜೆಡಿಎಸ್), ಕೆ.ಗೋಪಾಲಯ್ಯ (ಜೆಡಿಎಸ್), ನಾರಾಯಣ ಗೌಡ (ಜೆಡಿಎಸ್), ಪ್ರತಾಪ್ ಗೌಡ ಪಾಟೀಲ್ (ಕಾಂಗ್ರೆಸ್), ಬಿ.ಸಿ.ಪಾಟೀಲ್ (ಕಾಂಗ್ರೆಸ್), ಶಿವರಾಮ ಹೆಬ್ಟಾರ್ (ಕಾಂಗ್ರೆಸ್), ಎಸ್.ಟಿ.ಸೋಮಶೇಖರ (ಕಾಂಗ್ರೆಸ್), ಬೈರತಿ ಬಸವರಾಜು (ಕಾಂಗ್ರೆಸ್), ಮುನಿರತ್ನ (ಕಾಂಗ್ರೆಸ್) ಸುಪ್ರೀಂಗೆ ಅರ್ಜಿ ಸಲ್ಲಿಸಿದ ಶಾಸಕರು. ಜು.29ರಂದು ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಆರ್. ಶಂಕರ್ ಅವರು ಅನರ್ಹತೆ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಬಿಜೆಪಿ-ಕಾಂಗ್ರೆಸ್‌ನಲ್ಲಿ ಹುದ್ದೆಗಳಿಗಾಗಿ ಪೈಪೋಟಿ
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಹುದ್ದೆಗಾಗಿ ಪೈಪೋಟಿ ನಡೆದಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರುವುದರಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರ ನೇಮಕವಾಗಬೇಕಾಗಿದೆ. ಸಿ.ಟಿ.ರವಿ, ಅರವಿಂದ ಲಿಂಬಾವಳಿ, ನಳಿನ್ ಕುಮಾರ್ ಕಟೀಲ್ ಸೇರಿ ಹಲವು ನಾಯಕರ ಹೆಸರು ಕೇಳಿಬರುತ್ತಿವೆ. ಕಾಂಗ್ರೆಸ್‌ನಲ್ಲಿ ಪ್ರತಿಪಕ್ಷ ನಾಯಕ, ಕೆಪಿಸಿಸಿ ಅಧ್ಯಕ್ಷ, ವಿಧಾನಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕರ ಸ್ಥಾನಗಳಿಗೂ ಪೈಪೋಟಿ ಉಂಟಾಗಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷ ನಾಯಕ ಸ್ಥಾನ ತಪ್ಪಿಸಲು ದೊಡ್ಡ ದಂಡೇ ಪ್ರಯತ್ನಿಸುತ್ತಿದೆ. ರಮೇಶ್‌ಕುಮಾರ್, ಡಾ.ಜಿ.ಪರಮೇಶ್ವರ್. ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಕೃಷ್ಣ ಬೈರೇಗೌಡ ಹೆಸರು ಕೇಳಿಬರುತ್ತಿವೆ.