Advertisement

ಬಿಸಿಲೂರಲ್ಲಿ ದೇವದಾಸಿಯರಿಗೆ ಪ್ರತ್ಯೇಕ ಸಹಕಾರ ಸಂಘ

07:20 AM Jul 26, 2017 | Team Udayavani |

ರಾಯಚೂರು: ಸಮಾಜದಿಂದ ಅವಗಣನೆಗೆ ತುತ್ತಾದ ದೇವದಾಸಿಯರ ಕಲ್ಯಾಣಕ್ಕೆ ಸರ್ಕಾರ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಆದರೆ, ಜಿಲ್ಲೆಯಲ್ಲಿ ಮಾತ್ರ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರತ್ಯೇಕ ಸಹಕಾರ ಸಂಘಗಳನ್ನು
ಆರಂಭಿಸುವ ಮೂಲಕ ದೇವದಾಸಿಯರ ಅಭ್ಯುದಯಕ್ಕೆ ವಿಶೇಷ ಒತ್ತು ನೀಡಲಾಗಿದೆ. ಸಮಾಜದಿಂದ ತಿರಸ್ಕೃತಗೊಂಡ
ದೇವದಾಸಿಯರು ಚಿಂತಾಜನಕ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಸರ್ಕಾರ ನಿವೇಶನ, ಎರಡು ಎಕರೆ ಜಮೀನು, ಮಾಸಾಶನ ಸೇರಿ ವಿವಿಧ ಸೌಕರ್ಯ ನೀಡುತ್ತಿದ್ದರೂ ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಇಂಥ ವೇಳೆ ಅವರ ನೆರವಿಗೆ ಸಹಕಾರ ಸಂಘಗಳು ಧಾವಿಸಿದ್ದು, ಆರ್ಥಿಕ ಸ್ಥಿತಿ ಸುಧಾರಣೆಗೆ ಸಹಕರಿಸುತ್ತಿವೆ.

Advertisement

ಜಿಲ್ಲೆಯಲ್ಲಿ ಕಳೆದ ವರ್ಷವೇ ಎರಡು ಸಂಘಗಳು ಆರಂಭಗೊಂಡಿದ್ದು, ಈ ವರ್ಷ ಇನ್ನೆರಡು ಸಂಘಗಳ ಆರಂಭಕ್ಕೆ ಪ್ರಕ್ರಿಯೆ ನಡೆದಿದೆ. ಸಹಕಾರ ಸಂಘಗಳ ಉಪನಿಬಂಧಕರು ಇಂಥ ಹೊಸ ಯೋಜನೆ ಆರಂಭಿಸುವ ಮುಖ್ಯ ಪಾತ್ರ ವಹಿಸಿದ್ದಾರೆ. ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ ಇದ್ದು, ಸಹಕಾರ ಸಂಘಗಳ ನಿಬಂಧಕರ ಕಚೇರಿಯಿಂದ ಸಂಘದ ಎಲ್ಲ ಸದಸ್ಯರ ಷೇರಿನ ಮೊತ್ತ 500 ರೂ. ಪಾವತಿಸಲಾಗಿದೆ. ಉಳಿದಂತೆ ಸದಸ್ಯರು ಹಣ ಜಮಾ ಮಾಡಿ ಸಂಘಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಸರ್ಕಾರದಿಂದಲೇ ಷೇರು ಪಾವತಿ: 2017ರ ಮಾರ್ಚ್‌ನಲ್ಲಿ ಸಿಂಧನೂರು ತಾಲೂಕಿನಲ್ಲಿ ಜ್ಞಾನಜ್ಯೋತಿ, ಮಾನ್ವಿ ತಾಲೂಕಿನಲ್ಲಿ ಹೊಂಬೆಳಕು ಹೆಸರಿನಲ್ಲಿ ಸಂಘಗಳನ್ನು ಸ್ಥಾಪಿಸಲಾಯಿತು. ಸಿಂಧನೂರಿನಲ್ಲಿ 250 ಸದಸ್ಯರಿದ್ದು, ಮಾನ್ವಿಯಲ್ಲಿ 300 ಸದಸ್ಯರಿದ್ದಾರೆ. ಲಿಂಗಸುಗೂರು ಮತ್ತು ರಾಯಚೂರಿನಲ್ಲೂ ಸಂಘ ಸ್ಥಾಪಿಸಲು ಸರ್ಕಾರಕ್ಕೆ
ಪ್ರಸ್ತಾವನೆ ಸಲ್ಲಿಸಿದ್ದು, ಪರವಾನಗಿ ಸಿಕ್ಕಿದೆ. ರಾಯಚೂರಿನಲ್ಲಿ 350, ಲಿಂಗಸುಗೂರಿನಲ್ಲಿ 80 ಸದಸ್ಯರನ್ನೊಳಗೊಂಡ ಸಂಘಗಳ ನೋಂದಣಿ ಕಾರ್ಯ ಇನ್ನೆರಡು ತಿಂಗಳಲ್ಲಿ ಮುಗಿಯಲಿದೆ. ಎಲ್ಲ ಸಂಘಗಳ ಒಟ್ಟು 980 ಸದಸ್ಯರಿಗೆ ತಲಾ
500 ರೂ.ನಂತೆ 4.9 ಲಕ್ಷ ರೂ. ಷೇರು ಹಣವನ್ನು ಸರ್ಕಾರವೇ ಪಾವತಿಸಲಿದೆ.

ದೇವದಾಸಿಯರದ್ದೇ ಪಾರುಪತ್ಯ:
ದೇವದಾಸಿಯರಿಗೆ ಸಂಘದಲ್ಲಿ ಹೆಚ್ಚಿನ ಅಧಿಕಾರ ನೀಡಲಾಗಿದೆ. ಸಂಘದ ಸಂಪೂರ್ಣ ಹೊಣೆಯನ್ನು ಅವರೇ ನಿರ್ವಹಿಸಬೇಕು. ಹಿಂದುಳಿದ ವರ್ಗಗಳಲ್ಲದೇ ಬೇರೆ ಸಮುದಾಯದ ಮಹಿಳೆಯರು ಸದಸ್ಯತ್ವ ಪಡೆಯಬಹುದಾದರೂ, ಹೆಚ್ಚಿನ ಅಧಿಕಾರ ಮಾತ್ರ ಹಿಂದುಳಿದ ವರ್ಗಗಳಿಗೆ ಸಿಗಲಿದೆ. ಹೆಚ್ಚು ತುಳಿತಕ್ಕೆ ಒಳಗಾದ ಸಮಾಜ ಎಂಬ ಕಾರಣಕ್ಕೆ ಅವರಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಗುತ್ತಿದೆ. ಸಂಘದಲ್ಲಿ ಯಾವುದೇ ನಿರ್ಣಯ ಕೈಗೊಳ್ಳಲು ಬೇಕಾದ ಸಂಖ್ಯಾಬಲ ದೇವದಾಸಿಯರದ್ದಾಗಿರುತ್ತದೆ.

ಹೇಗೆ ಕಾರ್ಯ ನಿರ್ವಹಣೆ?: ಸಹಕಾರ ಸಂಘಗಳ ಉಪನಿಬಂಧಕರು ಸಂಘ ರಚಿಸಿ, ನೋಂದಣಿ ಮಾಡಿಸುವರು. ಸರ್ಕಾರ ಸದಸ್ಯರ ಸಂಖ್ಯೆಗನುಗುಣವಾಗಿ ಷೇರು ಹಣ ಸಂದಾಯ ಮಾಡಲಿದೆ. ಸದಸ್ಯರು ಒಗ್ಗೂಡಿ ಕಚೇರಿ ಸ್ಥಾಪಿಸಬೇಕು. ಒಮ್ಮತದಿಂದ ಒಬ್ಬ ಕಾರ್ಯದರ್ಶಿಯನ್ನು ನೇಮಿಸಬೇಕು. ಮೂರು ತಿಂಗಳಿಗೊಮ್ಮೆ ಲೆಕ್ಕಪತ್ರ ಪರಿಶೋಧನೆ ಮಾಡಿ ಇಲಾಖೆಗೆ ವಿವರ ನೀಡಬೇಕು. ಆದ್ಯತಾನುಸಾರ ಸಾಲ ಸೌಲಭ್ಯಗಳನ್ನು ಪಡೆದು ಕಾಲಕಾಲಕ್ಕೆ
ಮರುಪಾವತಿಯಾಗುವಂತೆ ನೋಡಿಕೊಳ್ಳುವ ಹೊಣೆ ಸಂಘದ ಆಡಳಿತ ಮಂಡಳಿಯದ್ದು. ಆಡಳಿತ ಮಂಡಳಿಯನ್ನು ಕೂಡ ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next