ಭಟ್ಕಳ: ಮುರುಡೇಶ್ವರಕ್ಕೆ ಆಗಮಿಸಿದ್ದ ಎರಡು ವಿಭಿನ್ನ ಗುಂಪಿಗೆ ಸೇರಿದ ಇಬ್ಬರು ಯುವಕರು ಒಂದೇ ದಿನ ಸಮುದ್ರ ಪಾಲಾಗಿರುವ ಘಟನೆ ಮುರುಡೇಶ್ವರ ಸಮುದ್ರ ತೀರದಲ್ಲಿ ನಡೆದಿದೆ.
ಇಬ್ಬರು ಕೂಡ ಬಾಗಲಕೋಟೆ ಜಿಲ್ಲೆಯವರೆಂದು ತಿಳಿದು ಬಂದಿದೆ. ಅವರಲ್ಲಿ ಓರ್ವ ಮಂಜುನಾಥ ರಮೇಶ ಹಡಪದ(25) ಬಾಗಲಕೋಟೆ ಜಿಲ್ಲೆಯ ನೀರ ಬೂದಿಹಾಳನವನಾಗಿದ್ದು, ಹಾಲಿ ನವನಗರದಲ್ಲಿ ವಾಸವಾಗಿದ್ದನು. ಈತ ತನ್ನ ಕುಟುಂಬದವರೊಂದಿಗೆ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ವೇಳೆ ಕುಟುಂಬ ಸದಸ್ಯರೊಂದಿಗೆ ಸಮುದ್ರದಲ್ಲಿ ಈಜುತ್ತಿದ್ದ ಸಂದರ್ಭ ಅಲೆಯ ರಭಸಕ್ಕೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಇನ್ನೋರ್ವ ಕೃಷ್ಣಪ್ಪ ಕರಿಯಪ್ಪ ಹರಕಂಗಿ (18) ಬಾಗಲಕೋಟೆ ಜಿಲ್ಲೆಯ ಲೋಕಾಪುರ ನಿವಾಸಿ. ಈತ ತನ್ನ ಧಾರವಾಡ ಮೂಲದ ನಾಲ್ಕು ಜನ ಸ್ನೇಹಿತರೊಂದಿಗೆ ಮುರುಡೇಶ್ವ ಪ್ರವಾಸಕ್ಕೆ ಬಂದಿದ್ದ. ಮೊದಲು ಈ ಗುಂಪು ದೇವಸ್ಥಾನದ ಎಡ ಬದಿಯ ಸಮುದ್ರದಲ್ಲಿ ಆಟವಾಡುತ್ತಿದ್ದವರು ನಂತರ ದೇವಸ್ಥಾನದ ಎಡ ಬದಿಯ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಕೃಷ್ಣಪ್ಪ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾನೆ.
ಸಾಲು ಸಾಲು ರಜೆದ ಹಿನ್ನೆಲೆ ಮುಡೇಶ್ವರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು ಸಮುದ್ರಕ್ಕೆ ಇಳಿಯದಂತೆ ಲೈಫ್ ಗಾರ್ಡ್ ಎಷ್ಟು ಬಾರಿ ಸೂಚಿಸಿದರೂ ಇದನ್ನು ಧಿಕ್ಕರಿಸಿ ಸಮುದ್ರ ಇಳಿದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಈ ಕುರಿತು ಮುರುಡೇಶ್ವ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.