Advertisement

ಪ್ಯತ್ಯೇಕ ಬಸ್‌ ಪಥ: ಸಂಚಾರ ಸುವ್ಯವಸ್ಥೆಯಲ್ಲೊಂದು ಪ್ರಯೋಗ

10:34 PM Oct 26, 2019 | mahesh |

ನಗರದಲ್ಲಿ ರಸ್ತೆ ಟ್ರಾಫಿಕ್‌ ಸಮಸ್ಯೆ ನಿವಾರಣೆಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದರೂ ಕೂಡ ಇಂದಿಗೂ ಸಮಸ್ಯೆ ನಿವಾರಣೆಗೆ ಕೊನೆಯ ಉತ್ತರ ಸಿಕ್ಕಿಲ್ಲ. ಇದಕ್ಕಾಗಿ ಬೆಂಗಳೂರಿನಲ್ಲಿ ಜಾರಿಗೊಳಿಸಿರುವ ಬಸ್‌ಗಳಿಗೆ ಪ್ರತ್ಯೇಕ ಪಥ (ಬಿಪಿಎಲ್‌) ಯೋಜನೆಯೂ ಪೂರಕವಾಗಲಿದೆ. ಇದರಿಂದ ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ಇದು ಉಪಯೋಗವಾಗಲಿದೆ. ಹಾಗಾಗಿ ಆಡಳಿತ ವ್ಯವಸ್ಥೆಯೂ ಗಮನಹರಿಸಬೇಕಿದೆ.

Advertisement

ಸಂಚಾರ ಅಡಚಣೆ (ಟ್ರಾಫಿಕ್‌ ಜಾಮ್‌) ಬಹುತೇಕ ನಗರಗಳಲ್ಲಿ ಕಾಡುವ ಸಮಾನ ಸಮಸ್ಯೆ. ರಸ್ತೆ ವಿಸ್ತರಣೆ, ಏಕಮುಖ ರಸ್ತೆಗಳಾಗಿ ಪರಿವರ್ತನೆ, ಘನವಾಹನಗಳಿಗ ನಿರ್ಬಂಧ ಮುಂತಾದ ಹಲವು ಪ್ರಯೋಗಗಳ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ. ಆದರೂ ಇದು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗುತ್ತಿಲ್ಲ. ಈಗ ಮಹಾನಗರಗಳಲ್ಲಿ ಪ್ರಮುಖ ಸಾರ್ವಜನಿಕ ಸಂಚಾರ ವ್ಯವಸ್ಥೆಯಾಗಿರುವ ಬಸ್‌ಗಳಿಗೆ ಪ್ರತ್ಯೇಕ ಪಥ ಪ್ರಯೋಗವೊಂದು (ಬಿಪಿಎಲ್‌) ಪರಿಚಯಗೊಳ್ಳುತ್ತಿದೆ. ಇಂತಹ ಪ್ರಯೋಗಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ. ಅಲ್ಲಿನ ಸಿಲ್ಕ್ ಬೋರ್ಡ್‌ ಜಂಕ್ಷನ್‌-ಕೆ.ಆರ್‌. ಪುರ ನಡುವಣ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಏಷ್ಯಾದಲ್ಲೇ ಈ ರೀತಿಯ ವ್ಯವಸ್ಥೆ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಅನುಷ್ಠಾನಗೊಂಡಿದೆ ಎಂದು ಹೇಳಲಾಗುತ್ತಿದೆ. ಇದರ ಸಾಧಕ-ಬಾಧಕಗಳನ್ನು ಆಧರಿಸಿ ಇನ್ನೂ 11 ಕಡೆಗಳಲ್ಲಿ ಇದನ್ನು ಅಳವಡಿಸಲು ಬಿಬಿಎಂಪಿ ಉದ್ದೇಶಿಸಿದೆ. ಇದು ಯಶಸ್ವಿಯಾದರೆ ಭವಿಷ್ಯದಲ್ಲಿ ಮಂಗಳೂರು ಸಹಿತ ರಾಜ್ಯದ ಪ್ರಮುಖ ನಗರಗಳಿಗೆ ಸಂಚಾರ ವ್ಯವಸ್ಥೆ ನಿರ್ವಹಣೆಗೆ ಇದೊಂದು ಮಾದರಿಯಾಗಲಿದೆ.

ಪ್ರಯೋಜನಗಳು
ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಬಸ್‌ಗಳದ್ದೇ ಪ್ರಮುಖ ಪಾತ್ರ. ಕಚೇರಿ ಕೆಲಸಗಳಿಗೆ, ವಾಣಿಜ್ಯ, ವ್ಯವಹಾರ ಚಟುವಟಿಕೆಗಳಿಗೆ ಹೋಗಲು ಬಹುತೇಕ ಜನ ಅವಲಂಬಿಸುವುದು ಬಸ್‌ ಸಾರಿಗೆಯನ್ನು. ಪ್ರಸ್ತುತ ವಾಹನ ದಟ್ಟಣೆ ಹೆಚ್ಚುತ್ತಿರುವುದರಿಂದ ಇದಕ್ಕೆ ಅನುಗುಣವಾಗಿ ಸಂಚಾರ ಪಥ ವೃದ್ಧಿಯೂ ಅಗತ್ಯವಿದೆ. ಆದರೆ ಬಂಡವಾಳ ಸಂಪನ್ಮೂಲದ ಕೊರತೆ ಇದಕ್ಕೆ ಎದುರಾಗುತ್ತದೆ. ಪೀಕ್‌ ಆವರ್‌ಗಳಲ್ಲಿ ವಾಹನ ದಟ್ಟಣೆಯಿಂದ ಕೆಲಸಗಳಿಗೆ ಹೋಗುವವರಿಗೆ, ಶಾಲಾ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಬೇಕಾಗುತ್ತದೆ. ಪ್ರತ್ಯೇಕ ಬಸ್‌ ಪಥವಿದ್ದರೆ ಅಲ್ಲಿ ಬಸ್‌ಗಳು ಮಾತ್ರ ಸಂಚರಿಸುವುದರಿಂದ ಬಸ್‌ಗಳಿಗೂ ಅನುಕೂಲವಾಗುತ್ತದೆ. ಇತರ ವಾಹನಗಳಿಗೂ ಸಹಕಾರಿಯಾಗುತ್ತದೆ. ಟ್ರಾಫಿಕ್‌ ಬ್ಲಾಕ್‌ಗಳೂ ನಿವಾರಣೆಯಾಗುತ್ತವೆ ಮಾತ್ರವಲ್ಲದೆ ಸಮಯ ಹಾಗೂ ಇಂಧನ ಉಳಿತಾಯದಲ್ಲೂ ಸಹಕಾರಿಯಾಗುತ್ತದೆ. ಪ್ರತ್ಯೇಕ ಬಸ್‌ ಪಥದಲ್ಲಿ ಬಸ್‌ಗಳಲ್ಲದೆ ಪ್ಯಾಸೆಂಜರ್‌ ವಾಹನಗಳು ಮ್ಯಾಕ್ಸಿ ಕ್ಯಾಬ್‌ಗಳಿಗೂ ಅವಕಾಶ ನೀಡುವುದು ಸಂಚಾರ ದಟ್ಟಣೆ ನಿವಾರಣೆಗೆ ಇನ್ನಷ್ಟು ಸಹಕಾರಿಯಾಗುತ್ತದೆ.

ನಗರ ಅತಿಯಾದ ವಾಹನ ದಟ್ಟಣೆ ಎದುರಿಸುತ್ತಿದ್ದು, ಬೆಂಗಳೂರು ಹಾದಿಯಲ್ಲಿ ಸಾಗುತ್ತಿದೆ. ಮಂಗಳೂರು ನಗರದಲ್ಲಿ ಸಿಟಿಬಸ್‌, ಸರ್ವಿಸ್‌ಬಸ್‌, ಎಕ್ಸ್‌ಪ್ರೆಸ್‌ ಬಸ್‌ಗಳು, ಟೂರಿಸ್ಟ್‌ ಬಸ್‌ಗಳು, ಅಂತಾರಾಜ್ಯ ಪರವಾನಿಗೆಯ ಬಸ್‌ಗಳು, ಶಾಲಾ-ಕಾಲೇಜುಗಳ ಬಸ್‌ಗಳು ಸಹಿತ ಸುಮಾರು 4 ಸಾವಿರಕ್ಕೂ ಅಧಿಕ ಬಸ್‌ಗಳು ಇವೆ. ಹಂಪನಕಟ್ಟೆ ಪ್ರದೇಶದಲ್ಲಿ ದಿನವೊಂದಕ್ಕೆ ಸಾವಿರಾರು ಬಸ್‌ಗಳು ಬರುತ್ತಿರುವುದರಿಂದ ಮಿತಿಮೀರಿದ ವಾಹನದಟ್ಟಣೆ ಸಮಸ್ಯೆ ಕಾಡುತ್ತಿದೆ. ಬಸ್‌ಗಳಿಗೆ ಹಂಪನಕಟ್ಟೆ ಪ್ರದೇಶಕ್ಕೆ ಪ್ರವೇಶಿಸಲು ಹೊಸದಾಗಿ ಪರವಾನಿಗೆ ಸಿಗುವುದಿಲ್ಲ.

ಯಾವುದೇ ರಸ್ತೆ ಇರಲಿ, ನಗರದೊಳಗೆ ಹಾದುಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿಗಳಾಗಲಿ ಟ್ರಾಫಿಕ್‌ ಜಾಮ್‌ ಇಲ್ಲಿ ದಿನನಿತ್ಯದ ಸಮಸ್ಯೆ. ನಗರದ ದ್ವಿಪಥ ರಸ್ತೆಗಳು ಚತುಷ್ಪಥವಾಗಿವೆ. ರಸ್ತೆಗಳು ಕಾಂಕ್ರೀಟೀಕರಣಗೊಂಡಿವೆ. ಹೆದ್ದಾರಿಗಳು ಪುನರ್‌ನಿರ್ಮಾಣಗೊಂಡಿವೆ. ಅದರೂ ಮಂಗಳೂರು ನಗರ ಮತ್ತು ಅದರ ವ್ಯಾಪ್ತಿಯೊಳಗಿನ ಹೆದ್ದಾರಿ ವೃತ್ತಗಳಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಮಂಗಳೂರು ನಗರದೊಳಗೆ ಟ್ರಾಫಿಕ್‌ ಜಾಮ್‌ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಒಂದಷ್ಟು ಪ್ರಯೋಗಗಳನ್ನು ಮಾಡಲಾಗಿದೆ. ಇದರಲ್ಲಿ ಹೆಚ್ಚಿನ ಯಶಸ್ಸು ಸಾಧಿಸಲು ಆಗಿಲ್ಲ.

Advertisement

ಕೆಲವು ಯಶಸ್ವಿಯಾಗಿದೆ ಹೊಸ ಕಾಮಗಾರಿಗಳಲ್ಲಿ ಪರಿಗಣನೆ
ನಗರದಲ್ಲಿ ಇನ್ನು ಮುಂದೆ ನಿರ್ಮಿಸುವ ಮತ್ತು ಅಭಿವೃದ್ಧಿಪಡಿಸುವ ಮುಖ್ಯರಸ್ತೆಗಳಲ್ಲಿ ಬಸ್‌ಗಳಿಗೆ ಪ್ರತ್ಯೇಕ ಪಥ ಮೀಸಲಿಡಬಹುದಾಗಿದೆ. ಈ ರೀತಿಯ ಪ್ರಸ್ತಾವವನ್ನು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅನುಷ್ಠಾನಕ್ಕೆ ಬಿಬಿಎಂಪಿ ಸರಕಾರಕ್ಕೆ ಸಲ್ಲಿಸಲು ಚಿಂತನೆ ನಡೆಸಿದೆ. ಇದು ಕೇವಲ ಬೆಂಗಳೂರಿಗೆ ಮಾತ್ರವಲ್ಲ, ಇತರ ಪ್ರಮುಖ ನಗರಗಳಿಗೂ ಪ್ರಸ್ತುತವಾದ ಪರಿಕಲ್ಪನೆ. ಬಸ್‌ಗಳ ಜತೆಗೆ ಇತರ ಕೆಲವು ಆಯ್ದ ವಾಹನಗಳಿಗೂ ಇದರಲ್ಲಿ ಅವಕಾಶ ಇದ್ದರೆ ಉತ್ತಮ. ಮಂಗಳೂರಿನಲ್ಲೂ ಇನ್ನು ಮುಂದಕ್ಕೆ ನಿರ್ಮಾಣವಾಗುವ ಮತ್ತು ಈಗ ಇರುವ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಗೊಳಿಸುವಾಗ ಪ್ರತ್ಯೇಕ ಬಸ್‌ ಪಥ ಪರಿಕಲ್ಪನೆಯ ಬಗ್ಗೆ ಚಿಂತನೆ ನಡೆಸಬಹುದಾಗಿದೆ.

ಏನಿದು ಬಿಪಿಎಲ್‌
ರಸ್ತೆಯಲ್ಲಿ ಬಸ್‌ಗಳ ಸಂಚಾರಕ್ಕೆಂದೇ ಪ್ರತ್ಯೇಕ ಮಾರ್ಗವನ್ನು ಮೀಸಲಿಡುವ ಪರಿಕಲ್ಪನೆ ಬಸ್‌ ಪ್ರಿಪರ್ಡ್‌ ಲೇನ್‌ ( ಬಿಪಿಎಲ್‌-ಬಸ್‌ ಆದ್ಯತಾ ವಲಯ ). ಬಸ್‌ಗಳ ಸಂಚಾರ ಸಮಯಪಾಲನೆಗೆ, ಆ ಮೂಲಕ ಸಾರ್ವಜನಿಕರು ಕ್ಲಪ್ತ ಸಮಯದಲ್ಲಿ ಕಚೇರಿ, ವ್ಯವಹಾರಗಳಿಗೆ ತಲುಪುವ ಅವಕಾಶ ಕಲ್ಪಿಸುವುದು ಒಂದೆಡೆಯಾದರೆ,ಇತರ ವಾಹನಗಳು ಎದುರಿಸುವ ಸಂಚಾರ ದಟ್ಟಣೆ ನಿವಾರಿಸಿ ಸಂಚಾರವನ್ನು ಸುಗಮಗೊಳಿಸುವುದು ಇನ್ನೊಂದು ಪ್ರಮುಖ ಗುರಿ. ಮೀಸಲಿಟ್ಟ ಪಥದಲ್ಲೆ ಬಸ್‌ಗಳು ಸಂಚರಿಸಬೇಕು. ಇತರ ಪಥದಲ್ಲಿ ಸಂಚರಿಸುವಂತಿಲ್ಲ. ಅದೇ ರೀತಿ ಇತರ ವಾಹನಗಳು ಈ ಪಥವನ್ನು ಪ್ರವೇಶಿಸುವಂತಿಲ್ಲ. ಈ ಪಥದ ಪಕ್ಕದಲ್ಲೇ ಬಸ್‌ನಿಲ್ದಾಣಗಳಿರುತ್ತವೆ.

-  ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next