ಹುಣಸೂರು: ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರೆ, ಮೂವರಿಗೆ ಗಾಯವಾಗಿರುವ ಘಟನೆ ನಡೆದಿದೆ. ಸ್ಕೂರಟರ್ ಅಪಘಾತದಲ್ಲಿ ತಾಲೂಕಿನ ಸಣ್ಣೆಗೌಡರ ಕಾಲೋನಿ ನಿವಾಸಿ ಪಳನಿಸ್ವಾಮಿ ಪತ್ನಿ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಲಕ್ಷಣ್‌ರ ಸಹೋದರಿ ಮಾಹಾಕಾಳಿ(38) ಮೃತರು.
ಇವರಿಗೆ 2 ಗಂಡು, ಒಬ್ಬ ಮಗಳಿದ್ದಾಳೆ. ಮನೆಯಿಂದ ತಾಯಿ-ಮಗಳು ಬೈಕ್‌ನಲ್ಲಿ ಹುಣಸೂರು ಕಡೆಗೆ ಬರುತ್ತಿದ್ದ ವೇಳೆ ರಸ್ತೆಯಲ್ಲಿ ಸಿ.ಬಿ.ಕಾಲೋನಿ ರಸ್ತೆಯಲ್ಲಿ ಟಯರ್ ಬರಸ್ಟ್ ಆಗಿ ವಾಹನ ಚಲಾಯಿಸುತ್ತಿದ್ದ ಮಹಾಕಾಳಿ ತೀವ್ರಪೆಟ್ಟು ಬಿದ್ದು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರೆ, ಈಕೆ ತಾಯಿ ಪಾರ್ವತಿ ಅವರಿಗೂ ಸಣ್ಣಪುಟ್ಟಗಾಯಗಳಾಗಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಅಪಘಾತ: ಹುಣಸೂರು ನಗರದ ಬಜಾರ್ ರಸ್ತೆಯ ಸ್ಟುಡಿಯೋ ಮಾಲಿಕ ಯೋಗೀಶ್ ಮತ್ತು ಆತನ ಸಹಾಯಕ ವಿರಾಟ್ ಸಮಾರಂಭವೊಂದರ ಛಾಯಾಚಿತ್ರ ತೆಗೆಯಲು ತಮ್ಮ ಕಾರಿನಲ್ಲಿ ಹುಣಸೂರಿನಿಂದ ಮಡಿಕೇರಿಗೆ ಗುರುವಾರ ಮಧ್ಯರಾತ್ರಿ ತೆರಳುತ್ತಿದ್ದ ವೇಳೆ ಹೆದ್ದಾರಿಯ ಯಶೋಧರಪುರದ ಬಳಿಯ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿ ಇಬ್ಬರಿಗೂ ತೀವ್ರಗಾಯಗಳಾಗಿವೆ.
ವಾಹನ ಸವಾರರು ಮಾಹಿತಿ ನೀಡಿದ ಮೇರೆಗೆ ಗ್ರಾಮಸ್ಥರ ನೆರವಿನಿಂದ ಪೊಲೀಸರು ಗಾಯಾಳುಗಳನ್ನು ಹುಣಸೂರು ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್.ಐ.ಮಹೇಶ್ ತಿಳಿಸಿದ್ದಾರೆ.