Advertisement

ಪ್ರತ್ಯೇಕ ಅಪಘಾತ: 10 ಸಾವು

06:00 AM Nov 26, 2017 | Team Udayavani |

ಬೆಂಗಳೂರು: ರಾಜ್ಯದ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಶನಿವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸಾಗುತ್ತಿದ್ದ ಕಾರು ಶಿವಮೊಗ್ಗದ ಕುಂಸಿ ಬಳಿ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆ ಯಿತು. ಈ ಅಪಘಾತದಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಆಪ್ತ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಲೋಕೇಶ್‌ ಮತ್ತು ಇವರೊಂದಿಗೆ ಪ್ರಯಾಣಿಸುತ್ತಿದ್ದ ನೇತ್ರಾವತಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಇವರಿಬ್ಬರೂ ಸಿಗಂದೂರು ಮತ್ತು ಜೋಗ ವೀಕ್ಷಣೆಗೆ ಬೆಂಗಳೂರಿನಿಂದ ತೆರಳಿದ್ದರು ಎಂದು ಹೇಳಲಾಗಿದೆ.

Advertisement

ನಿಂತಿದ್ದ ಕಾರಿಗೆ ಸ್ಕಾರ್ಪಿಯೋ ಢಿಕ್ಕಿ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪ ಶನಿವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಗಳೂರಿನ 6 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಐವರು ಒಂದೇ ಕುಟುಂಬದವರಾಗಿದ್ದಾರೆ.

ಎರ್ಟಿಗಾದಲ್ಲಿ  ಪ್ರಯಾಣಿಸುತ್ತಿದ್ದ ಬೆಂಗಳೂರಿನ ಮತ್ತಿಕೆರೆಯ ನಿವಾಸಿಗಳಾದ ಒಂದೇ ಕುಟುಂಬದ ಪ್ರವೀಣ್‌ ದೇವರ ಶೆಟ್ಟಿ (35), ಅವರ ಪತ್ನಿ ಸೌಮ್ಯಾ (30), ಮಕ್ಕಳಾದ ಶರತ್‌ (6), ಪ್ರಣೀಕಾ (3), ಸೌಮ್ಯಾಳ ಸಹೋದರ ಸಾಗರ್‌ (28) ಹಾಗೂ ಸ್ಕಾರ್ಪಿಯೋದಲ್ಲಿದ್ದ ಚಿತ್ರದುರ್ಗ ನಿವಾಸಿ ಅನ್ವರ್‌ ಅಲಿಯಾಸ್‌ ಶಿವು (55) ಮೃತಪಟ್ಟಿದ್ದಾರೆ.

ಕಾರು-ಆಟೋ ಢಿಕ್ಕಿಯಾಗಿ ಇಬ್ಬರ ಸಾವು: ಕಲಬುರಗಿಯಿಂದ ತಾಲೂಕಿನ ಚಿಣಮಗೇರಿಯ ವೀರಭದ್ರೇಶ್ವರ ಜಾತ್ರೆ ವೀಕ್ಷಿಸಲು ತೆರಳುತ್ತಿದ್ದ ಆಟೋಗೆ ಕಾರು ಢಿಕ್ಕಿಯಾಗಿ ಇಬ್ಬರು ಮೃತ ರಾಗಿದ್ದಾರೆ.

ಮೃತರನ್ನು ಕಲಬುರಗಿಯ ಪಲ್ಲವಿ ಪ್ರಸನ್ನಕುಮಾರ ಶಿರೂರಮಠ (30), ಆಟೋ ಚಾಲಕ ದೇವಲ ಗಾಣಗಾಪುರ ಮೂಲದ ಮಹೇಶ ಮಾರುತಿ ಶೆಟ್ಟಿ (26) ಎಂದು ಗುರುತಿಸಲಾಗಿದೆ.

Advertisement

ನೇತ್ರಾವತಿ ಕಣ್ಮರೆ ಬಗ್ಗೆ ದೂರು: ಶಿವಮೊಗ್ಗದ ಕುಂಸಿ ಬಳಿ ಶನಿವಾರ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಇಬ್ಬರಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರ ಆಪ್ತಶಾಖೆಯ ಶಾಖಾಧಿಕಾರಿ ಲೋಕೇಶ್‌ ಜತೆ ಇದ್ದ ಮಹಿಳೆ  ವಿಕಾಸ ಸೌಧದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೇತ್ರಾವತಿ ಎಂದು ಗುರುತಿಸಲಾಗಿದೆ.

ಈ ಮಧ್ಯೆ ನೇತ್ರಾವತಿ ಅವರ ಪತಿ ಯೋಗೇಶ್‌ ನ.  23ರಂದು ವಿಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ನ. 22ರಂದು ಬೆಳಗ್ಗೆ 8 ಗಂಟೆಗೆ ಕೌಟುಂಬಿಕ ವಿಚಾರ ಸಂಬಂಧ ಪತ್ನಿ ಜತೆ  ಜಗಳವಾಗಿತ್ತು. ಅನಂತರ ಅದೇ ದಿನ ಸಂಜೆ ನಾಲ್ಕು ಗಂಟೆ ಸುಮಾರಿಗೆ ಪುತ್ರ ನನಗೆ ಕರೆ ಮಾಡಿ ಅಮ್ಮ ಮನೆಯಲ್ಲಿ ಇಲ್ಲ ಎಂದು ತಿಳಿಸಿದ್ದ. ಈ ಬಗ್ಗೆ ಹುಡುಕಾಡಿದರು ಆಕೆ ಪತ್ತೆಯಾಗಿಲ್ಲ. ಆಕೆಯನ್ನು ಹುಡುಕಿಕೊಡಬೇಕು ಎಂದು ಕೋರಿದ್ದರು. ಅಲ್ಲದೇ, ನೇತ್ರಾವತಿ ಲೋಕೇಶ್‌ ಅವರ ಜತೆ ಹೋಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಜತೆಗೆ ಲೋಕೇಶ್‌ ಕುಮಾರ್‌ ಅವರ ಮೊಬೈಲ್‌ ನಂಬರ್‌ಗಳನ್ನು ಕೂಡ ದೂರಿನಲ್ಲಿ ಉಲ್ಲೇಖೀಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next