ಒಮ್ಮೆ ನೀವು ಚಿತ್ರರಂಗಕ್ಕೆ ಎಂಟ್ರಿಕೊಟ್ಟರೆ, ಮತ್ತೆ ಅದರಿಂದ ದೂರವಾಗೋದು ಕಷ್ಟದ ಮಾತು. ಅಲ್ಲೇ ಇದ್ದು ಸಾಧಿಸಬೇಕೆಂದು ಕನಸು ಕಾಣುವವರು ಮತ್ತು ಆ ನಿಟ್ಟಿನಲ್ಲಿ ಪ್ರಯತ್ನಿಸುವವರು ಅನೇಕರಿದ್ದಾರೆ. ಆ ಸಾಲಿಗೆ ವಿಕ್ರಮ್ ಆರ್ಯ ಕೂಡಾ ಸೇರುತ್ತಾರೆ. ಎಲ್ಲಾ ಓಕೆ, ಯಾರು ಈ ವಿಕ್ರಮ್ ಆರ್ಯ ಎಂದು ನೀವು ಕೇಳಬಹುದು. ಈ ಹಿಂದೆ “ತಲೆ ಬಾಚ್ಕೋಳ್ಳಿ ಪೌಡ್ರು ಹಾಕ್ಕೊಳ್ಳಿ’ ಎಂಬ ಸಿನಿಮಾವನ್ನು ನಿರ್ಮಿಸಿ, ನಟಿಸಿದ್ದ ವಿಕ್ರಮ್ ಈಗ “ಪದ್ಮಾವತಿ’ ಎಂಬ ಸಿನಿಮಾ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ.
ಹೆಸರಿಗೆ ತಕ್ಕಂತೆ ಇದು ನಾಯಕಿ ಪ್ರಧಾನ ಚಿತ್ರ. ಮುಖ್ಯವಾಗಿ ಈ ಚಿತ್ರದಲ್ಲಿ ತಾಯಿ ಮಗನ ಸಂಬಂಧದ ಬಗ್ಗೆ ಹೇಳಲಾಗಿದೆಯಂತೆ. ಹಾಗಾಗಿ, ಈ ಚಿತ್ರ ಎಲ್ಲರ ಮನಮುಟ್ಟುತ್ತದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ. ಮಿಥುನ್ ಚಂದ್ರಶೇಖರ್ ಈ ಚಿತ್ರದ ನಿರ್ದೇಶಕರು. ದಾಮೋದರ್ ರಾವ್ ಈ ಚಿತ್ರದ ನಿರ್ಮಾಪಕರು. ಸ್ನೇಹಿತ ವಿಕ್ರಮ್ ಆರ್ಯ ಅವರಿಗೋಸ್ಕರ ಈ ಚಿತ್ರ ಮಾಡಿದ್ದಾಗಿ ಹೇಳಿಕೊಂಡರು ದಾಮೋದರ್.
ನಾಯಕ ವಿಕ್ರಮ್ ಆರ್ಯ ಇಲ್ಲಿ ಮಿಲಿಟರಿ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದಾರಂತೆ. “ಆರಂಭದಲ್ಲಿ ಏನೂ ಗೊತ್ತಿಲ್ಲದೇ ಚಿತ್ರರಂಗಕ್ಕೆ ಬಂದು ಒಂದಷ್ಟು ಅನುಭವ ಪಡೆದೆ. ಈಗ ಎರಡೂವರೆ ವರ್ಷದ ನಂತರ ಮತ್ತೆ ಬರುತ್ತಿದ್ದೇನೆ. ನಮ್ಮದು ಚಿಕ್ಕ ಬಜೆಟ್ ಸಿನಿಮಾ. ತುಂಬಾ ಕಷ್ಟಪಟ್ಟು ಮಾಡಿದ್ದೇವೆ. ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಹೈಲೈಟ್’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು.
ಈ ಹಿಂದೆ ಸಾಯಿಪ್ರಕಾಶ್ ಅವರ ಜೊತೆ ಹಲವು ಸಿನಿಮಾಗಳಿಗೆ ಕೆಲಸ ಮಾಡಿರುವ ಮಿಥುನ್ ಚಂದ್ರಶೇಖರ್ ಅವರಿಗೆ “ಪದ್ಮಾವತಿ’ ಚೊಚ್ಚಲ ಚಿತ್ರ. ಚಿತ್ರದ ಬಗ್ಗೆ ನೇರವಾಗಿ ಮಾತನಾಡದೇ ಒಗಟಿನ ರೀತಿ ಮಾತನಾಡಲು ಪ್ರಯತ್ನಿಸಿದರು. ಜೊತೆಗೆ ಚಿತ್ರದಲ್ಲಿ ಲವ್, ಸೆಂಟಿಮೆಂಟ್, ಆ್ಯಕ್ಷನ್ ಎಲ್ಲವೂ ಇದೆ ಎನ್ನಲು ಮರೆಯಲಿಲ್ಲ. ಲತಾ ಎನ್ನುವವರು ಬರೆದ ಕಥೆಯನ್ನು ಸಿನಿಮಾ ಮಾಡಿರುವ ನಿರ್ದೇಶಕರು, ಆರಂಭದಲ್ಲಿ ಈ ಪ್ರೀತಿಯ ಮರೆತು ಎಂಬ ಟೈಟಲ್ ಇಡಲು ನಿರ್ಧರಿಸಿದ್ದರಂತೆ. ಆದರೆ, ಕಾರಣಾಂತರಗಳಿಂದ ಆ ಟೈಟಲ್ ಕೈ ಬಿಟ್ಟು, “ಪದ್ಮಾವತಿ’ ಎಂದಿಟ್ಟಿದ್ದಾರೆ. ಶಿವಮೊಗ್ಗ, ಹೊಸನಗರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಸಾಕ್ಷಿ ಮೇಘನಾ ನಾಯಕಿಯಾಗಿ ನಟಿಸಿದ್ದಾರೆ. ಒಂದೇ ಚಿತ್ರದಲ್ಲಿ ವಿಭಿನ್ನ ಶೇಡ್ ಇರುವ ಪಾತ್ರ ಸಿಕ್ಕಿದೆಯಂತೆ. ಚಿತ್ರಕ್ಕೆ ದಿನೇಶ್ ಕುಮಾರ್ ಸಂಗೀತ ನೀಡಿದ್ದು, ಅನೇಕಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.
ಅಂದಹಾಗೆ, ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಯಿತು. ಲಹರಿ ಸಂಸ್ಥೆ ಹಾಡುಗಳನ್ನು ಹೊರತಂದಿದೆ. ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.