ಕಾರವಾರ: ಮನುಷ್ಯರಿಗೆ ಸೂಕ್ಷ್ಮತೆ ಇದ್ದರೆ ಸಂವೇದನೆ ಸಾಧ್ಯ. ಹಣ ಮಾಡುವುದರ ಹಿಂದೆ ಬಿದ್ದವನು ಮನುಷ್ಯನಾಗಿ ಇರಲಾರ. ಸೂಕ್ಷ್ಮ ಗ್ರಹಿಕೆ ಇದ್ದವನು ಕವಿಯಾಗುತ್ತಾನೆ ಎಂದು ಹಿರಿಯ ಸಾಹಿತಿ ಪ್ರೊ| ಮೋಹನ ಹಬ್ಬು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇಲ್ಲಿನ ಬಿಇಡಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಐಕ್ಯತೆ ಸಪ್ತಾಹ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕವಿಗೋಷ್ಠಿ ಮತ್ತು ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನರ ಬದುಕಿನ ಗ್ರಹಿಕೆಯೇ ಸಾಹಿತ್ಯ ಗಂಗೋತ್ರಿ. ಬದುಕನ್ನುಸೂಕ್ಷ್ಮ ದೃಷ್ಟಿಯಿಂದ ನೋಡಬೇಕು ಹಾಗೂ ಗ್ರಹಿಸಬೇಕು ಎಂದರು. ನಿರಂತರ ಅಧ್ಯಯನ, ಸೂಕ್ಷ್ಮ ಗ್ರಹಿಕೆ ಹಾಗೂ ನಿರ್ಬಿಡೆ ಬರಹ ನಿಮ್ಮ ಬದುಕನ್ನು ಬದಲಿಸಬಹುದು. ಅದು ನೀವು ಸಾಹಿತಿ ಮತ್ತು ಕವಿಯಾಗಲು ಪ್ರೇರಣೆ ನೀಡುತ್ತದೆ. ನಿಮಗೆ ಅನಿಸಿದ್ದನ್ನು ಸ್ಪಷ್ಟವಾಗಿ ದಾಖಲಿಸಬೇಕು, ಅಭಿವ್ಯಕ್ತಿಗೊಳಿಸಬೇಕು. ಬರವಣಿಗೆ ಜನಪರವಾಗಿರಬೇಕು. ಆಧುನಿಕ ಸೌಲಭ್ಯಗಳೇ ಬದುಕಾಗಬಾರದು, ಅದರ ಹೊರತಾದ ಅನುಭವಗಳೂ ಬದುಕನ್ನು ಕಟ್ಟಿಕೊಡುತ್ತವೆ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ನಾಗರಾಜ್ ಸಿಂಗ್ರೇರ್ ಮಾತನಾಡಿ, ದೇಶದ ಐಕ್ಯತೆಗೆ ಯುವ ಸಮುದಾಯದ ಸನ್ನಡತೆ ಬಹುಮುಖ್ಯವಾಗಿದೆ. ಇದಕ್ಕೆ ಹೆಚ್ಚು ಚರ್ಚೆಗಳು, ಬರವಣಿಗೆಗಳು ಸ್ಫೂರ್ತಿ ನೀಡುತ್ತವೆ ಎಂದರು. ಯುವ ಸಮುದಾಯದಲ್ಲಿ ಕ್ರಿಯಾಶೀಲತೆ, ಚರ್ಚೆ, ಸೂಕ್ಷ್ಮ ಗ್ರಹಿಕೆ ಇಲ್ಲದಿದ್ದರೆ ಒಂದೇ ಸಿದ್ಧಾಂತದ ಕಡೆ ವಾಲುವ ಅಪಾಯ ಎದುರಾಗುತ್ತದೆ. ವಿಚಾರಗೋಷ್ಠಿಗಳು ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಿದವರೊಂದಿಗೆ ಮಾಡುವ ಚರ್ಚೆಯಿಂದ ಸಮತೋಲನ ಮನಸ್ಥಿತಿ ಬರುತ್ತದೆ. ದೇಶದಲ್ಲಿ ಐಕ್ಯತಾ ಮನೋಭಾವ ಹೊಂದಲು ಅನುಕೂಲವಿದೆ ಎಂದರು. ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚರ್ಯ ಶಿವಾನಂದ ವಿ. ನಾಯಕ ಮಾತನಾಡಿ, ವಿವಿಧತೆಯಲ್ಲಿ ಏಕತೆ ಸಾರುವ ಜಗತ್ತಿನ ಏಕೈಕ ರಾಷ್ಟ್ರ ಭಾರತ ಎಂದರು.
ಭೌಗೋಳಿಕವಾಗಿ ಪ್ರತಿ 30 ಕಿಲೋ ಮೀಟರ್‌ಗೆ ನಮ್ಮ ಭಾಷೆ, ಸಂಸ್ಕೃತಿ, ಪದ್ಧತಿಗಳು ಬದಲಾಗುವ ಮತ್ತು ಭಿನ್ನ ಸಂಸ್ಕೃತಿ, ವೈರುದ್ಯಗಳನ್ನು ಹೊಂದಿದ್ದರೂ ನಾವೆಲ್ಲರೂ ಭಾರತೀಯರೆಂಬ ಭಾತೃತ್ವವನ್ನು ಸಾರುತ್ತೇವೆ. ಇದಕ್ಕೆ ಕಾರಣ ನಮ್ಮ ಸಾಹಿತ್ಯದಲ್ಲಿನ ಗಟ್ಟಿತನ ಎಂದರು. ಬಿಎಡ್ ವಿದ್ಯಾರ್ಥಿಗಳಾದ ಆಶಾ ಎಚ್., ಕವಿತಾ ನಾಯ್ಕ, ಪ್ರಿಯಾಂಕಾ ಕೋಲ್ವೇಕರ್, ನಮ್ರಾತಾ ಬಾಂದೇಕರ್, ರವಿರಾಜ್ ದೊಡ್ಡಮನಿ, ವೈಭವ ಹೆಗಡೆ, ಲಕ್ಷ್ಮೀ ಎಂ.ಎನ್, ಪೂಜಾ ನಾಯ್ಕ ಅವರು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವಿತೆಗಳನ್ನು ವಾಚಿಸಿದರು. ಹೆಣ್ಣು ಭ್ರೂಣ ಹತ್ಯೆ, ಲಿಂಗ ತಾರತಮ್ಯ ಹಾಗೂ ಹೆಣ್ಣಿನ ಶೋಷಣೆ
ಬಗ್ಗೆ ವಾಚಿಸಿದ ಕವಿತೆಗಳು ಮಾನವೀಯ ಮುಖದ ಕನ್ನಡಿಯಾಗಿದ್ದವು. ಸುಚಿತ್ರಾ ಅಂಬಿಗಾ, ಪೂಜಾಗೌಡ, ಸ್ಫೂ ರ್ತಿ ಶೆಟ್ಟಿ, ತೇಜಸ್ವಿ ನಾಯ್ಕ, ನಾಗವೇಣಿ , ಪೂಜಾ ನಾಯ್ಕ ಸೇರಿದಂತೆ ಹಲವರು ಹಿರಿಯ ಸಾಹಿತಿ ಪ್ರೊ| ಮೋಹನ್ ಹಬ್ಬು ಅವರಿಗೆ ವರ್ತಮಾನದ ಘಟನೆಗಳನ್ನಾಧರಿಸಿ ಪ್ರಶ್ನೆಗಳನ್ನು ಕೇಳಿ ಸಂವಾದ ನಡೆಸಿದರು.
ವಾರ್ತಾಧಿಕಾರಿ ಹಿಮಂತರಾಜು ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾಜಿ ಶಿಕ್ಷಣ ಮಹಾ ವಿದ್ಯಾಲಯದ ಉಪನ್ಯಾಸಕ ಶಿವಕುಮಾರ್ ನಾಯ್ಕ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ಪ್ರಿಯಾ ನಾಯ್ಕ ವಂದಿಸಿದರು.