ಮುಂಬೈ:ದೇಶದ ಆರ್ಥಿಕ ಚೇತರಿಕೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸತತ ಮೂರನೇ ಬಾರಿಗೆ ರೆಪೋ ಮತ್ತು ರಿವರ್ಸ್ ರೆಪೋ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿರುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಮುಂಬೈ ಶೇರುಮಾರುಕಟ್ಟೆಯಲ್ಲಿ ಭರ್ಜರಿ ವಹಿವಾಟಿಗೆ ಸಾಕ್ಷಿಯಾಗಿದ್ದು, ಮೊದಲ ಬಾರಿಗೆ ಮುಂಬೈ ಶೇರುಪೇಟೆ ಸೆನ್ಸೆಕ್ಸ್ 45,000 ಗಡಿ ತಲುಪಿದೆ.
ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 446.90 ಅಂಕಗಳ ಏರಿಕೆಯೊಂದಿಗೆ 45,079.55 ಅಂಕಗಳೊಂದಿಗೆ ದಾಖಲೆ ಮಟ್ಟದಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ. ರಾಷ್ಟ್ರೀಯ ಶೇರುಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ 124.65 ಅಂಕಗಳ ಏರಿಕೆಯೊಂದಿಗೆ 13,280.05 ಅಂಕಗಳ ವಹಿವಾಟಿನೊಂದಿಗೆ ಅಂತ್ಯಗೊಂಡಿದೆ.
ರಾಷ್ಟ್ರೀಯ ಶೇರುಮಾರುಕಟ್ಟೆ ನಿಫ್ಟಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರ ಶೇ.4ನ್ನು ಬದಲಾಯಿಸದೇ ಯಥಾಸ್ಥಿತಿಯಲ್ಲೇ ಮುಂದುವರಿಸಿದೆ. ಇದರಿಂದಾಗಿ ಹೂಡಿಕೆದಾರರು ಭರ್ಜರಿಯಾಗಿ ಶೇರುಮಾರುಕಟ್ಟೆಯಲ್ಲಿ ಖರೀದಿ ಮತ್ತು ಮಾರಾಟದಲ್ಲಿ ತೊಡಗಿದ್ದರಿಂದ ದಾಖಲೆ ವಹಿವಾಟು ನಡೆಸಿದೆ.
ಇದನ್ನೂ ಓದಿ:ಭಾರತ- ಆಸ್ಟ್ರೇಲಿಯಾ ನಡುವಿನ ಬಾರ್ಡರ್ – ಗವಾಸ್ಕರ್ ಸರಣಿಗಿದೆ ರೋಚಕ ಇತಿಹಾಸ!
ಐಸಿಐಸಿಐ ಬ್ಯಾಂಕ್, ಆಲ್ಟ್ರಾಟೆಕ್ ಸಿಮೆಂಟ್, ಸನ್ ಫಾರ್ಮಾ, ಭಾರ್ತಿ ಏರ್ ಟೆಲ್, ಎಚ್ ಯುಎಲ್, ಎಸ್ ಬಿಐ, ಎಲ್ ಆ್ಯಂಡ್ ಟಿ, ಆ್ಯಕ್ಸಿಸ್ ಬ್ಯಾಂಕ್, ಇಂಡಸ್ ಲ್ಯಾಂಡ್ ಬ್ಯಾಂಕ್, ನೆಸ್ಲೆ, ಟೈಟಾನ್ ಮತ್ತು ಕೋಟಕ್ ಬ್ಯಾಂಕ್ ಶೇರುಗಳು ಶೇ.4.20ರಷ್ಟು ಏರಿಕೆ ಕಂಡು ಲಾಭಗಳಿಸಿವೆ.