ಮುಂಬಯಿ : 2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುತ್ತದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿರುವ ಕಾರಣ ಅಮಿತೋತ್ಸಾಹ ಪಡೆದಿರುವ ಮುಂಬಯಿ ಶೇರು ಪೇಟೆ ಇಂದು ಸೋಮವಾರದ ವಹಿವಾಟಿನಲ್ಲಿ 1,422 ಅಂಕಗಳ ಬೃಹತ್ ಜಿಗಿತವನ್ನು ದಾಖಲಿಸಿ ವಸ್ತುತಃ ಸುನಾಮಿಯನ್ನೇ ಉಂಟುಮಾಡಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 421 ಅಂಕಗಳ ಅಮೋಘ ಏರಿಕೆಯನ್ನು ದಾಖಲಿಸಿತು.
ಸೆನ್ಸೆಕ್ಸ್ ಇಂದಿನ ವಹಿವಾಟನ್ನು 39,352.67 ಅಂಕಗಳ ಮಟ್ಟದಲ್ಲಿ ಅದ್ಭುತವಾಗಿ ಕೊನೆಗೊಳಿಸಿದರೆ, ನಿಫ್ಟಿ 11,828.25 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಮುಗಿಸಿತು.
ಮೋದಿ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಂಡರೆ ಎನ್‌ಡಿಎ-1 ರ ಆರ್ಥಿಕ ಸುಧಾರಣಾ ಉಪ ಕ್ರಮಗಳು ಇನ್ನಷ್ಟು ಬಲವಾಗಿ ಮುಂದುವರಿಯುತ್ತವೆ ಎಂಬ ಆಶಾವಾದ ಶೇರು ಮಾರುಕಟ್ಟೆಯಲ್ಲಿ ತುಂಬಿಕೊಂಡಿರುವುದೇ ಇಂದಿನ ಬೃಹತ್ ಜಿಗಿತಕ್ಕೆ ಕಾರಣವಾಗಿದೆ.
ಡಾಲರ್ ಎದುರು ರೂಪಾಯಿ ಇಂದಿನ ವಹಿವಾಟಿನಲ್ಲಿ 64 ಪೈಸೆಗಳ ಏರಿಕೆಯನ್ನು ದಾಖಲಿಸಿತು. ಬ್ರೆಂಟ್ ಕಚ್ಚಾತೈಲ ಶೇ.1.40 ಏರಿಕೆಯನ್ನು ಕಂಡು ಬ್ಯಾರಲ್ ಗೆ 72.61 ಡಾಲರ್ ಮಟ್ಟದಲ್ಲಿ ವ್ಯವಹರಿಸುತ್ತಿತ್ತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,813 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 2,019 ಶೇರುಗಳು ಮುನ್ನಡೆ ಸಾಧಿಸಿದವು; 609 ಶೇರುಗಳು ಹಿನ್ನಡೆಗೆ ಗುರಿಯಾದವು; 185 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.