ಮುಂಬಯಿ : ಜಾಗತಿಕ ಶೇರು ಪೇಟೆಗಳಲ್ಲಿ ತೋರಿ ಬಂದಿರುವ ಮಿಶ್ರ ಪ್ರತಿಕ್ರಿಯೆಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಬುಧವಾರ ಏಳು ಬೀಳುಗಳನ್ನು ಕಾಣುತ್ತಲೇ ಸಾಗಿ ದಿನದ ವಹಿವಾಟನ್ನು 203.65 ಅಂಕಗಳ ನಷ್ಟದೊಂದಿಗೆ 37,114.88 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 65.05 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 11,157ರ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ಅತೀ ದೊಡ್ಡ ಲೂಸರ್ ಗಳಾದ ಎಸ್ ಬ್ಯಾಂಕ್ ಮತ್ತು ಟಾಟಾ ಮೋಟರ್ ತಲಾ ಶೇ.8ರ ನಷ್ಟಕ್ಕೆ ಗುರಿಯಾದವು.
ಇಂಡಸ್ ಇಂಡ್ ಬ್ಯಾಂಕ್, ಕೋಲ್ ಇಂಡಿಯಾ, ಸನ್ ಫಾರ್ಮಾ, ಪವರ್ ಗ್ರಿಡ್, ಭಾರ್ತಿ ಏರ್ ಟೆಲ್, ಎಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ಎಚ್ ಯು ಎಲ್, ಮಾರುತಿ, ಲಾರ್ಸನ್, ಮಹೀಂದ್ರ, ಐಸಿಐಸಿಐ ಬ್ಯಾಂಕ್ ಶೇರುಗಳು ಶೇ.3.66ರ ನಷ್ಟಕ್ಕೆ ಗುರಿಯಾದವು.
ವಿದೇಶಿ ಬಂಡವಾಳದ ನಿರಂತರ ಹೊರ ಹರಿವಿನ ಕಾರಣ ಹೂಡಿಕೆದಾರರು ಪ್ರತಿಯೊಂದು ಸಣ್ಣ ಸಣ್ಣ ರಾಲಿಯನ್ನು ಕೂಡ ಲಾಭ ನಗದೀಕರಣಕ್ಕೆ ಬಳಸುತ್ತಿರುವುದೇ ಶೇರು ಮಾರುಕಟ್ಟೆಯ ಹಿನ್ನಡೆಗೆ ಕಾರಣವೆಂದು ಪರಿಣತರು ಹೇಳಿದ್ದಾರೆ. ಡಾಲರ್ ಎದುರು ರೂಪಾಯಿ ಇಂದು 11 ಪೈಸೆಗಳ ಏರಿಕೆಯನ್ನು ಕಂಡು 70.33 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,743 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,000 ಶೇರುಗಳು ಮುನ್ನಡೆ ಸಾಧಿಸಿದವು; 1,566 ಶೇರುಗಳು ಹಿನ್ನಡೆಗೆ ಗುರಿಯಾದವು; 187 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.