ಮುಂಬಯಿ : ನಿರಂತರ ಆರನೇ ದಿನದ ಕುಸಿತದಲ್ಲಿ ಇಂದು ಬುಧವಾರದ ವಹಿವಾಟಿನ ಅಂತ್ಯದಲ್ಲಿ 284 ಅಂಕಗಳ ನಷ್ಟ ಅನುಭವಿಸಿದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಮೂರು ತಿಂಗಳ ಕನಿಷ್ಠ ಮಟ್ಟವಾಗಿ 33,033.09 ಅಂಕಗಳ ಮಟ್ಟಕ್ಕೆ ಕುಸಿಯಿತು.
ಅಮೆರಿಕದ ಶ್ವೇತ ಭವನದ ಆರ್ಥಿಕ ಸಲಹೆಗಾರ ಗ್ಯಾರಿ ಕೋಹನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಜಾಗತಿಕ ವಾಣಿಜ್ಯ ಸಮರ ತೀವ್ರಗೊಳ್ಳುವುದೆಂಬ ಭಯ ಕಾಡಲು ಆರಂಭಿಸಿರುವ ಕಾರಣ ವಿಶ್ವಾದ್ಯಂತದ ಶೇರು ಮಾರುಕಟ್ಟೆಗಳು ನಡುಗತೊಡಗಿವೆ.
ಸೆನ್ಸೆಕ್ಸ್ ಕಳೆದ ಐದು ದಿನಗಳ ವಹಿವಾಟಿನಲ್ಲಿ 1,128.55 ಅಂಕಗಳನ್ನು ಕಳೆದುಕೊಂಡಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 95.05 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,154.20 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ದೇಶೀಯ ಸಾಂಸ್ಥಿಕ ಹೂಡಿಕೆದಾರರು 734.33 ಕೋಟಿ ರೂ. ಮೌಲ್ಯದ ಶೇರುಗಳನ್ನು ಮಾರಿದರು. ಆದರೆ ಇದೇ ವೇಳೆ ವಿದೇಶೀ ಹೂಡಿಕೆದಾರರು 620.08 ಕೋಟಿ ರೂ. ಮೌಲ್ಯದ ಶೇರುಗಳನ್ನು ಖರೀದಿಸಿದರು.