ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿರುವ ಹೊರತಾಗಿಯೂ ಮುಂಬಯಿ ಶೇರು ಪೇಟೆ ಇಂದು 279 ಅಂಕಗಳ ಜಿಗಿತವನ್ನು ಸಾಧಿಸಿತು. ಇದೇ ರೀತಿ ಮುನ್ನಡೆ ಸಾಧಿಸಿದ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,250 ಅಂಕಗಳ ಮನೋ ಪ್ರಾಬಲ್ಯದ ಮಟ್ಟವನ್ನು ಪುನರ್ ಸಂಪಾದಿಸಿತು.
ಐಟಿ ಮತ್ತು ಹಣಕಾಸು ರಂಗದ ಶೇರುಗಳ ಧಾರಣೆ ಗಮನಾರ್ಹ ಏರಿಕೆ ಕಂಡ ಕಾರಣ ಸೆನ್ಸೆಕ್ಸ್ ಇಂದು ಗುರುವಾರದ ವಹಿವಾಟನ್ನು 37,393.48 ಅಂಕಗಳ ಮಟ್ಟದಲ್ಲೂ ನಿಫ್ಟಿ 100.10 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 11, 257.10 ಅಂಕಗಳ ಮಟ್ಟದಲ್ಲೂ ಕೊನೆಗೊಳಿಸಿದವು.
1,114 ಕೋಟಿ ರೂ. ನಿವ್ವಳ ಲಾಭ ಗಳಿಸಿದ ಬಜಾಜ್ ಫಿನಾನ್ಸ್ ಕಂಪೆನಿ ಶೇರು ಧಾರಣೆ ಇಂದು ಶೇ.3.64ರ ಜಿಗಿತವನ್ನು ದಾಖಲಿಸಿತು.
ಉಳಿದಂತೆ ಟಾಟಾ ಮೋಟರ್, ಇನ್‌ಫೋಸಿಸ್, ವೇದಾಂತ, ಒಎನ್‌ಜಿಸಿ, ಪವರ್ ಗ್ರಿಡ್, ಎನ್‌ಟಿಪಿಸಿ, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಬ್ಯಾಂಕ್, ಎಸ್‌ಬಿಐ, ಎಚ್ ಡಿ ಎಫ್ ಸಿ ಬ್ಯಾಂಕ್, ಟಾಟಾ ಸ್ಟೀಲ್ ಶೇರುಗಳು ಶೇ.3.48ರ ಏರಿಕೆ ದಾಖಲಿಸಿದವು.
ಡಾಲರ್ ಎದುರು ರೂಪಾಯಿ ಇಂದು 27 ಪೈಸೆಯ ಏರಿಕೆಯನ್ನು ದಾಖಲಿಸಿ 70.07 ರೂ. ಮಟ್ಟಕ್ಕೇರಿತು. ಬ್ರೆಂಟ್ ಕಚ್ಚಾ ತೈಲ ಬೆಲೆ ಶೇ.0.56ರ ಏರಿಕೆಯನ್ನು ಕಂಡು ಬ್ಯಾರಲ್‌ಗೆ 72.17 ಡಾಲರ್ ದರದಲ್ಲಿ ಬಿಕರಿಯಾಗುತ್ತಿತ್ತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,625 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,164 ಶೇರುಗಳು ಮುನ್ನಡೆ ಸಾಧಿಸಿದವು; 1,315 ಶೇರುಗಳು ಹಿನ್ನಡೆಗೆ ಗುರಿಯಾದವು; 146 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.