ಮುಂಬಯಿ : ದುರ್ಬಲ ರೂಪಾಯಿ, ಜೂನ್ ತಿಂಗಳ ವಾಯಿದೆ ವಹಿವಾಟು ಚುಕ್ತಾ, ಕಚ್ಚಾ ತೈಲ ಕಳವಳ, ವಾಣಿಜ್ಯ ಸಮರ ಭೀತಿ ಇವೆ ಮೊದಲಾದ ಹಲವಾರು ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 179 ಅಂಕಗಳ ನಷ್ಟದೊಂದಿಗೆ 35,037.64 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಹಲವಾರು ಬ್ರೋಕರ್‌ಗಳು ತಮ್ಮ ಎಫ್ ಆ್ಯಂಡ್ ಓ ಬದ್ಧತೆಯನ್ನು ಜುಲೈ ತಿಂಗಳಿಗೆ ಮುಂದೊಯ್ಯದೆ ಇಂದೇ ಚುಕ್ತಾ ಮಾಡಿರುವುದು ಕೂಡ ಶೇರು ಪೇಟೆ ಕುಸಿತಕ್ಕೆ ಕಾರಣವಾಯಿತು.
ಅಮೆರಿಕ ತನ್ನ ಎಲ್ಲ ಮಿತ್ರ ದೇಶಗಳಿಗೆ ನವೆಂಬರ್ ಒಳಗೆ ಇರಾನ್ ತೈಲ ಆಮದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಸೂಚಿಸಿರುವುದು ಕೂಡ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 78 ಡಾಲರ್‌ಗೆ ಏರಲು ಕಾರಣವಾಯಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 82.30 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,589.10 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ನಿನ್ನೆ ಬುಧವಾರ ವಿದೇಶಿ ಹೂಡಿಕೆದಾರರು 67.44 ಕೋಟಿ ರೂ. ಶೇರುಗಳನ್ನು ಖರೀದಿಸಿದ್ದರೆ ಪ್ರತಿಯಾಗಿ, ದೇಶೀಯ ಹೂಡಿಕೆದಾರ ಸಂಸ್ಥೆಗಳು 84.31 ಕೋಟಿ ರೂ. ಶೇರುಗಳನ್ನು ಖರೀದಿಸಿದ್ದವು.