ಮುಂಬಯಿ : ನಿರಂತರ ಮೂರು ದಿನಗಳಿಂದ ಏರುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 247.68 ಅಂಕಗಳ ನಷ್ಟದೊಂದಿಗೆ 39,502.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 67.65 ಅಂಕಗಳನ್ನು ಕಳೆದುಕೊಂಡು ದಿನದ ವಹಿವಾಟನ್ನು 11,861.10 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಜಾಗತಿಕ ಶೇರು ಮಾರುಕಟ್ಟೆಗಳಲ್ಲಿನ ನಿರುತ್ಸಾಹ ಮತ್ತು ವಿದೇಶಿ ಬಂಡವಾಳದ ಹೊರ ಹರಿವಿನ ಕಾರಣ ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್, ಮೆಟಲ್ ಮತ್ತು ಆಟೋ ವಲಯದ ಶೇರುಗಳು ಮಾರಾಟ ಒತ್ತಡಕ್ಕೆ ಗುರಿಯಾದವು.
ಇಂದು ಅತೀ ದೊಡ್ಡ ಲೂಸರ್ ಎನಿಸಿಕೊಂಡ ಎಸ್‌ಬಿಐ ಶೇ.3.29ರ ನಷ್ಟಕ್ಕೆ ಗುರಿಯಾಯಿತು. ಉಳಿದಂತೆ ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಮಾರುತಿ ಶೇರುಗಳು ಶೇ.2.76ರ ನಷ್ಟಕ್ಕೆ ಗುರಿಯಾದವು.
ಡಾಲರ್ ಎದುರು ರೂಪಾಯಿ ಇಂದು 18 ಪೈಸೆಯ ಹಿನ್ನಡೆಯನ್ನು ಕಂಡು 69.87 ರೂ. ಮಟ್ಟಕ್ಕೆ ಕುಸಿಯಿತು. ಬ್ರೆಂಟ್ ಕಚ್ಚಾ ತೈಲ ಇಂದು ಶೇ.2.16ರ ಕುಸಿತವನ್ನು ಅನುಭವಿಸಿ ಬ್ಯಾರಲ್ ಗೆ 67.19 ಡಾಲರ್ ಮಟ್ಟದಲ್ಲಿ ಬಿಕರಿಯಾಗುತ್ತಿತ್ತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,724 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,061 ಶೇರುಗಳು ಮುನ್ನಡೆ ಸಾಧಿಸಿದವು; 1,503 ಶೇರುಗಳು ಹಿನ್ನಡೆಗೆ ಗುರಿಯಾದವು; 160 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.