ಮುಂಬಯಿ : ಅಮೆರಿಕ – ಚೀನ ನಡುವಿನ ವಾಣಿಜ್ಯ ಬಿಕ್ಕಟ್ಟು ಬಗೆಹರಿಯುವ ಲಕ್ಷಣ ತೋರಿಬಾರದ ಕಾರಣ ಜಾಗತಿಕ ಶೇರು ಮಾರುಕಟ್ಟೆಗಳ ಕುಸಿತ ಮುಂದುವರಿದಿದೆ. ಹಾಗಿದ್ದರೂ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 150 ಅಂಕಗಳ ಏರಿಕೆಯನ್ನು ಕಂಡರೂ ಅನಂತರದಲ್ಲಿ 17 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್ 7.36 ಅಂಕಗಳ ಮುನ್ನಡೆಯೊಂದಿಗೆ 37,566.27 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 6.10 ಅಂಕಗಳ ನಷ್ಟದೊಂದಿಗೆ 11,295.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಆರ್‌ಐಎಲ್, ಟಾಟಾಮೋಟರ್, ಎಚ್ ಡಿ ಎಫ್ ಸಿ, ಎಕ್ಸಿಸ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ಐಸಿಐಸಿಐ ಬ್ಯಾಂಕ್, ಮತ್ತು ಟಿಸಿಎಸ್ ಶೇರುಗಳು ಶೇ.1.04ರ ಏರಿಕೆಯನ್ನು ದಾಖಲಿಸಿದವು.
ಆದರೆ ಎಚ್‌ಸಿಎಲ್ ಟೆಕ್, ಏಶ್ಯನ್ ಪೇಂಟ್, ಬಜಾಜ್ ಫಿನಾನ್ಸ್, ಎಚ್ ಯು ಎಲ್, ಇಂಡಸ್ ಇಂಡ್ ಬ್ಯಾಂಕ್, ಪವರ್ ಗ್ರಿಡ್, ಲಾರ್ಸನ್ ಶೇರುಗಳು ಶೇ.4.31ರ ನಷ್ಟಕ್ಕೆ ಗುರಿಯಾದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 7 ಪೈಸೆಯ ನಷ್ಟಕ್ಕೆ ಗುರಿಯಾಗಿ 70.01 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಬ್ರೆಂಟ್ ಕಚ್ಚಾತೈಲದ ಧಾರಣೆ ಇಂದು ಶೇ.0.33ರಷ್ಟು ಇಳಿಕೆಯಾಗಿ ಬ್ಯಾರಲ್ ಗೆ 70.62 ಡಾಲರ್ ಮಟ್ಟದಲ್ಲಿ ಬಿಕರಿಯಾಗುತ್ತಿತ್ತು.