ಮುಂಬಯಿ : ಚೀನದೊಂದಿಗೆ ಸದ್ಯದಲ್ಲೇ ವಾಣಿಜ್ಯ ವಹಿವಾಟನ್ನು ಕುದುರಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದನ್ನು ಅನುಸರಿಸಿ ಜಾಗತಿಕ ಶೇರು ಪೇಟೆಗಳಲ್ಲಿ ಸ್ಥಿರತೆ ಮೂಡಿ ಬಂದಿದ್ದು ಅದೇ ಹಾದಿಯಲ್ಲಿ ಸಾಗಿದ ಮುಂಬಯಿ ಶೇರು ಪೇಟೆ ನಿರಂತರ ಎರಡನೇ ದಿನವಾಗಿ, ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ಉತ್ತಮ ಮುನ್ನಡೆಯನ್ನು ದಾಖಲಿಸಿತು.
ನಿನ್ನೆ ಮಂಗಳವಾರದ ವಹಿವಾಟನ್ನು ಸೆನ್ಸೆಕ್ಸ್ 227.71 ಅಂಕಗಳ ಮುನ್ನಡೆಯೊಂದಿಗೆ 37,318.53 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತ್ತು. ನಿಫ್ಟಿ 73.85 ಅಂಕಗಳ ಜಿಗಿತದೊಂದಿಗೆ 11,222.05 ಅಂಕಗಳ ಮಟ್ಟಕ್ಕೇರಿತ್ತು.
ಬೆಳಗ್ಗೆ 10.50ರ ಸುಮಾರಿಗೆ ಸೆನ್ಸೆಕ್ಸ್ 196.91 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 37,515.44 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 52.30 ಅಂಕಗಳ ಏರಿಕೆಯೊಂದಿಗೆ 11,274.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ವಹಿವಾಟಿನ ಟಾಪ್ ಗೇನರ್‌ಗಳಾದ ಎಸ್ ಬ್ಯಾಂಕ್, ಟಾಟಾ ಮೋಟರ್, ಸನ್ ಫಾರ್ಮಾ, ಕೋಲ್ ಇಂಡಿಯಾ, ಎನ್‌ಟಿಪಿಸಿ, ಹೀರೋ ಮೋಟೋ ಕಾರ್ಪ್, ಬಜಾಜ್ ಆಟೋ, ಎಚ್‌ಯುಎಲ್, ಭಾರ್ತಿ ಏರ್‌ಟೆಲ್, ಏಶ್ಯನ್ ಪೇಂಟ್ ಶೇರುಗಳು ಶೇ.3.04ರ ಏರಿಕೆಯನ್ನು ಕಂಡವು.
ಡಾಲರ್ ಎದುರು ರೂಪಾಯಿ 18 ಪೈಸೆಗಳ ಏರಿಕೆಯನ್ನು ದಾಖಲಿಸಿ 70.26 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. ಬ್ರೆಂಟ್ ಕಚ್ಚಾ ತೈಲ ಬೆಲೆ ಇಂದು ಶೇ.0.31ರ ಇಳಿಕೆಯನ್ನು ಕಂಡು ಬ್ಯಾರಲ್ ಗೆ 71.02 ಡಾಲರ್ ಮಟ್ಟದಲ್ಲಿ ಬಿಕರಿಯಾಗುತ್ತಿತ್ತು.