ಮುಂಬಯಿ : ಯುಎಸ್ ಫೆಡರಲ್ ರಿಸರ್ವ್ ಚೇರ್‌ಮನ್ ಜೆರೋಮ್ ಪೊವೆಲ್ ಅವರು ಸದ್ಯದಲ್ಲೇ ರೇಟ್ ಕಟ್ ಉಪಕ್ರಮದ ಸುಳಿವು ನೀಡಿದ ಹಿನ್ನೆಲೆಯಲ್ಲಿ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಕಂಡು ಬಂದ ತೇಜಿಯನ್ನು ಅನುಸರಿಸಿ ಮುಂಬಯಿ
ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿತು.
ಬೆಳಗ್ಗೆ 11ರ ಸುಮಾರಿಗೆ ಸೆನ್ಸೆಕ್ಸ್ 171.98 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 38,729.02 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 53 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 11,551.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಟಾಪ್ ಗೇನರ್‌ಗಳಾಗಿ ಮೂಡಿ ಬಂದ ವೇದಾಂತ, ಟಾಟಾ ಸ್ಟೀಲ್, ಎಸ್‌ಬಿಐ, ಟಾಟಾ ಮೋಟರ್, ಒಎನ್‌ಜಿಸಿ, ಪವರ್ ಗ್ರಿಡ್, ಎಸ್ ಬ್ಯಾಂಕ್, ಸನ್ ಫಾರ್ಮಾ, ಮಹೀಂದ್ರ ಶೇರುಗಳು ಶೇ.2ರ ಏರಿಕೆಯನ್ನು ದಾಖಲಿಸಿದವು.
ಇದಕ್ಕೆ ವ್ಯತಿರಿಕ್ತವಾಗಿ ಬಜಾಜ್ ಫಿನಾನ್ಸ್, ಟೆಕ್ಕೆಮ್, ಏಶ್ಯನ್ ಪೇಂಟ್, ಇನ್‌ಫೋಸಿಸ್, ಐಸಿಐಸಿಐ ಬ್ಯಾಂಕ್, ಹೀರೋ ಮೋಟೋ ಕಾರ್ಪ್, ಬಜಾಜ್ ಆಟೋ, ಕೋಟಕ್ ಬ್ಯಾಂಕ್, ಟಿಸಿಎಸ್ ಶೇರುಗಳು ಶೇ. 1.50 ಪ್ರಮಾಣದ ಇಳಿಕೆಯನ್ನು ಕಂಡವು.
ಡಾಲರ್ ಎದುರು ರೂಪಾಯಿ ಇಂದು ಫೆಡ್ ರೇಟ್ ಕಟ್ ಸಂಭಾವ್ಯತೆಯ ಸುಳಿವನ್ನು ಅನುಸರಿಸಿ 26 ಪೈಸೆಗಳ ಏರಿಕೆಯನ್ನು ಕಂಡು 68.31 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಬ್ರೆಂಟ್ ಅಂತಾರಾಷ್ಟ್ರೀಯ ಕಚ್ಚಾ ತೈಲ ಇಂದು ಶಎಈ.0.39ರ ಏರಿಕೆಯನ್ನು ದಾಖಲಿಸಿ ಬ್ಯಾರಲ್ ಗೆ 67.27 ಡಾಲರ್‌ಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.