ಮುಂಬಯಿ : ಭಾರತೀಯ ರಿಸರ್ವ್ ಬ್ಯಾಂಕ್ ನ ದ್ವೆ„ಮಾಸಿಕ ಹಣಕಾಸು ನೀತಿಯ ಪರಾಮರ್ಶೆಯ ಸಭೆ ಇಂದು ಸೋಮವಾರ ಆರಂಭಗೊಳ್ಳುವುದಕ್ಕೆ ಮುನ್ನವೇ ಭಾರೀ ನಿರೀಕ್ಷೆ ಇರಿಸಿಕೊಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಟಿನಲ್ಲಿ 200ಕ್ಕೂ ಅಧಿಕ ಅಂಕಗಳ ನೆಗೆತವನ್ನು ದಾಖಲಿಸಿತು.
ಕಳೆದ ಶುಕ್ರವಾರದ ವಹಿವಾಟನ್ನು ಮುಂಬಯಿ ಶೇರು 118 ಅಂಕಗಳ ನಷ್ಟದೊಂದಿಗೆ ಕೊನೆಗೊಳಿಸಿತ್ತಾದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 23 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಇಂದು ಮತ್ತೆ ಚಿಗುರಿಕೊಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಬೆಳಗ್ಗೆ 10.45ರ ಸುಮಾರಿಗೆ 186 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 39,900.46 ಅಂಕಗಳ ಮಟ್ಟದಲ್ಲೂ ನಿಫ್ಟಿ 52.50 ಅಂಕಗಳ ಮುನ್ನಡೆಯೊಂದಿಗೆ 11,975.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಟಾಪ್ ಗೇನರ್‌ಗಳಾದ ಹೀರೋ ಮೋಟೋ ಕಾರ್ಪ್, ಏಶ್ಯನ್ ಪೇಂಟ್, ಬಜಾಜ್ ಆಟೋ, ಎಚ್‌ಯುಎಲ್, ಅವಳಿ ಎಚ್ ಡಿ ಎಫ್ ಸಿ, ಪವರ್ ಗ್ರಿಡ್, ಟಿಸಿಎಸ್, ಬಜಾಜ್ ಫಿನಾನ್ಸ್ ಶೇರುಗಳು ಶೇ.3ರ ಏರಿಕೆಯನ್ನು ದಾಖಲಿಸಿದವು.
ಆರ್‌ಬಿಐ ಇದೇ ಗುರುವಾರ ತನ್ನ ದ್ವೆ„ಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಲಿದೆ. ಕಳೆದ ಎರಡು ಬಾರಿಯ ಪರಾಮರ್ಶೆಯಲ್ಲಿ ಆರ್‌ಬಿಐ ತಲಾ ಶೇ.0.25ರ ಪ್ರಮಾಣದಲ್ಲಿ ರಿಪೋ ದರ ಕಡಿತ ಮಾಡಿತ್ತು.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇದೀಗ ನಿರಂತರ ಮೂರನೇ ಬಾರಿಗೆ ರೇಟ್ ಕಟ್ ಕ್ರಮ ಕೈಗೊಳ್ಳುವರೆಂಬ ನಿರೀಕ್ಷೆ ಶೇರು ಪೇಟೆಯಲ್ಲಿ ಇದೆ.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಇಂದು 31 ಪೈಸೆಗಳ ಏರಿಕೆಯನ್ನು ದಾಖಲಿಸಿ 69.39 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಬ್ರೆಂಟ್ ಕಚ್ಚಾ ತೈಲ ಇಂದು ಶೇ.1.13ರ ಇಳಿಕೆಯನ್ನು ಕಂಡು ಬ್ಯಾರಲ್‌ಗೆ 61.29 ಡಾಲರ್ ಮಟ್ಟದಲ್ಲಿ ಬಿಕರಿಯಾಗುತ್ತಿತ್ತು.