ಮುಂಬಯಿ : ಜಾಗತಿಕ ವಾಣಿಜ್ಯ ಸಮರ ಭೀತಿ ಕಾಡುತ್ತಿರುವ ನಡುವೆಯೇ ಪ್ರಕೃತ ನಡೆಯುತ್ತಿರುವ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕಿನ ನಿರ್ಣಾಯಕ ಸಭೆಯ ಫಲಿತಾಂಶ ಪ್ರಕಟಗೊಳ್ಳುವ ಮುನ್ನ ಕಂಡು ಬಂದಿರುವ ಎಚ್ಚರಿಕೆಯ ನಡೆಯ ಪರಿಣಾಮವಾಗಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 86 ಅಂಕಗಳ ಅಲ್ಪ ಏರಿಕೆಯೊಂದಿಗೆ 39,046.34 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಜೆಟ್ ಏರ್ ವೇಸ್ ಶೇರು ಇಂದು ಶೇ.40.48ರ ಭಾರೀ ಕುಸಿತಕ್ಕೆ ಗುರಿಯಾಯಿತು. ಎಸ್‌ಬಿಐ ನೇತೃತ್ವದ ಸಾಲ ನೀಡಿಕೆ ಕೂಟದ ನಿಲುವು ಇದಕ್ಕೆ ಕಾರಣವಾಯಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 19.35 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 11,691.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ಒಂದು ಹಂತದಲ್ಲಿ ಸೆನ್ಸೆಕ್ಸ್ 300 ಅಂಕಗಳ ಏಳು ಬೀಳನ್ನು ಕಂಡಿತ್ತು. ಅಂತಿಮವಾಗಿ 86 ಅಂಕಗಳ ಏರಿಕೆಯನ್ನು ದಾಖಲಿಸಿತು.
ಇಂದಿನ ಟಾಪ್ ಗೇನರ್‌ಗಳ ಪೈಕಿ ವೇದಾಂತ, ಕೋಲ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಪವರ್ ಗ್ರಿಡ್, ಎಚ್ ಸಿ ಎಲ್ ಟೆಕ್, ಬಜಾಜ್ ಫಿನಾನ್ಸ್ ಶೇ. 2.65ರ ಏರಿಕೆಯನ್ನು ಕಂಡವು.
ಇಂದು ಮತ್ತೆ ಎಸ್ ಬ್ಯಾಂಕ್ ಶೇ. 5.94 ರ ಕುಸಿತಕ್ಕೆ ಗುರಿಯಾಯಿತು. ಮಾರುತಿ, ಏಶ್ಯನ್ ಪೇಂಟ್, ಸನ್ ಫಾರ್ಮಾ, ಅವಳಿ ಎಚ್ ಡಿ ಎಫ್ ಸಿ ಶೇರುಗಳು ಶೇ.2.20 ನಷ್ಟ ಅನುಭವಿಸಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,660 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 964 ಶೇರುಗಳು ಮುನ್ನಡೆ ಸಾಧಿಸಿದವು; 1,572 ಶೇರುಗಳು ಹಿನ್ನಡೆಗೆ ಗುರಿಯಾದವು; 124 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.