ಮುಂಬಯಿ : ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿನ ಹೆಚ್ಚಳ ಮತ್ತು ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದಿರುವ ಹಿನ್ನಡೆಯನ್ನು ಅನುಸರಿಸಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 150ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಸರಕಾರ ಇಂದು ಸಗಟು ಹಣದುಬ್ಬರ ಅಂಕಿ ಅಂಶ ಪ್ರಕಟಿಸಲಿದ್ದು ಹೂಡಿಕೆದಾರರು ಮತ್ತು ವಹಿವಾಟುದಾರರು ಅದನ್ನು ಕುತೂಹಲದಿಂದ ಎದುರು ನೋಡುತ್ತಿರುವ ಕಾರಣ ಮುಂಬಯಿ ಶೇರು ಪೇಟೆಯಲ್ಲಿ ಇಂದು ಎಚ್ಚರಿಕೆಯ ನಡೆ ಕಂಡು ಬಂತು.
ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 149.74 ಅಂಕಗಳ ನಷ್ಟದೊಂದಿಗೆ 39,591.62 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 54.60 ಅಂಕಗಳ ನಷ್ಟದೊಂದಿಗೆ 11,859.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದು ಬೆಳಗ್ಗೆಯ ಟಾಪ್ ಲೂಸರ್‌ಗಳಾದ ಎಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಆಟೋ, ಕೋಟಕ್ ಬ್ಯಾಂಕ್, ಹೀರೋ ಮೋಟೋ ಕಾರ್ಪ್, ಸನ್ ಫಾರ್ಮಾ, ಐಸಿಐಸಿಐ ಬ್ಯಾಂಕ್, ಮಹೀಂದ್ರ, ಆರ್‌ಐಎಲ್ ಮತ್ತು ಟಾಟಾ ಮೋಟರ್ ಶೇರುಗಳು ಶೇ.2ರ ನಷ್ಟಕ್ಕೆ ಗುರಿಯಾದವು.
ಬ್ರೆಂಟ್ ಅಂತಾರಾಷ್ಟ್ರೀಯ ಕಚ್ಚಾ ತೈಲ ಇಂದು ಶೇ. 0.62ರ ಏರಿಕೆಯೊಂದಿಗೆ ಬ್ಯಾರಲ್ ಗೆ 61.69 ಡಾಲರ್ ಮಟ್ಟದಲ್ಲಿ ಬಿಕರಿಯಾಗುತ್ತಿತ್ತು.
ಡಾಲರ್ ಎದುರು ರೂಪಾಯಿ ಇಂದು 7 ಪೈಸೆಯ ಇಳಿಕೆಯನ್ನು ಕಂಡು 69.57 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.