ಮುಂಬಯಿ: ಜಾಗತಿಕ ಆರ್ಥಿಕ ಬೆಳವಣಿಗೆಗಳು ಷೇರು ಹೂಡಿಕೆದಾರರ ಆಸಕ್ತಿಗೆ ತಣ್ಣೀರೆರಚಿದ ಪರಿಣಾಮ, ಸತತ 2ನೇ ವಹಿವಾಟಿನ ದಿನವೂ ಷೇರುಪೇಟೆ ನಷ್ಟ ಅನುಭವಿಸಿದೆ.
ಹೂಡಿಕೆದಾರರು ಒಂದೇ ಸಮನೆ ಷೇರುಗಳ ಮಾರಾಟದಲ್ಲಿ ತೊಡಗಿದ ಕಾರಣ, ಸೋಮವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 470.40 ಅಂಕಗಳ ಇಳಿಕೆ ಕಂಡು, 48,564.27ರಲ್ಲಿ ವಹಿವಾಟು ಅಂತ್ಯಗೊಳಿಸಿತು. ಇದೇ ವೇಳೆ, ನಿಫ್ಟಿ 152.40 ಅಂಕ ಕುಸಿದು, 14,281.30ರಲ್ಲಿ ಕೊನೆಯಾಯಿತು.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಅತೀ ಹೆಚ್ಚು ನಷ್ಟ ಅನುಭವಿಸಿದ್ದು ಒಎನ್‌ಜಿಸಿ. ಇದರ ಷೇರುಗಳು ಶೇ.4.59ರಷ್ಟು ಕುಸಿತ ಕಂಡವು. ಜತೆಗೆ ಸನ್ ಫಾರ್ಮಾ, ಇಂಡಸ್‌ಇಂಡ್ ಬ್ಯಾಂಕ್, ಪವರ್‌ಗ್ರಿಡ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್, ಎಸ್‌ಬಿಐ ಮತ್ತು ಎನ್‌ಟಿಪಿ ಕೂಡ ನಷ್ಟ ಅನುಭವಿಸಿದವು.
ಕೇವಲ ರಿಲಯನ್ಸ್ ಇಂಡಸ್ಟ್ರೀಸ್, ಟೈಟಾನ್, ಎಚ್‌ಡಿಎಫ್ಸಿ ಬ್ಯಾಂಕ್ ಮತ್ತು ಐಟಿಸಿ ಷೇರುಗಳು ಮಾತ್ರ ಏರಿಕೆ ಕಂಡವು. ಇನ್ನು, ಡಾಲರ್ ಎದುರು ರೂಪಾಯಿ ದರ 21 ಪೈಸೆ ಇಳಿಕೆಯಾಗಿ, 73.28ಕ್ಕಿಳಿಯಿತು. ಇದು ಕೂಡ ಸೆನ್ಸೆಕ್ಸ್ ಕುಸಿತಕ್ಕೆ ಕಾರಣವಾಯಿತು.
ಚಿನ್ನದ ದರ ಏರಿಕೆ: ದಿಲ್ಲಿ ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನದ ದರ 117 ರೂ. ಹೆಚ್ಚಳವಾಗಿ, 10 ಗ್ರಾಂಗೆ 48,332 ರೂ. ಆಯಿತು. ಬೆಳ್ಳಿ ದರವೂ 541 ರೂ. ಏರಿಕೆ ಕಂಡು, ಕೆಜಿಗೆ 64,657 ರೂ.ಗೆ ತಲುಪಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಹಳದಿ ಲೋಹದ ದರ ಔನ್ಸ್‌ಗೆ 1,834 ಡಾಲರ್ ಆಯಿತು.