ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಬೇಕಾಬಿಟ್ಟಿ ಮಾರಾಟ ಕಂಡು ಬಂದ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯಲ್ಲೂ ಅದೇ ಪ್ರವೃತ್ತಿ ತೋರಿ ಬಂದ ಕಾರಣ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸೆನೆಕ್ಸ್ 400ಕ್ಕೂ ಅಧಿಕ ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಯಿತು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 16 ಪೈಸೆಗಳ ಕುಸಿತವನ್ನು ಹಿನ್ನಡೆಯನ್ನು ಕಂಡು 68.58 ರೂ. ಮಟ್ಟಕ್ಕೆ ಇಳಿಯಿತು.
ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್ 434.99 ಅಂಕಗಳ ನಷ್ಟದೊಂದಿಗೆ 39,078.40 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 138.40 ಅಂಕಗಳ ನಷ್ಟದೊಂದಿಗೆ 11,672.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಟಾಪ್ ಲೂಸರ್‌ಗಳ ಪೈಕಿ ಹೀರೋ ಮೋಟೋ ಕಾರ್ಪ್, ಎಲ್ ಆ್ಯಂಡ್ ಟಿ, ಮಾರುತಿ, ಬಜಾಜ್ ಆಟೋ, ಮಹೀಂದ್ರ, ಟಾಟಾ ಮೋಟರ್, ಎಚ್‌ಯುಎಲ್ ಶೇರುಗಳು ಶೇ.3.44 ಅಂಕಗಳ ನಷ್ಟಕ್ಕೆ ಗುರಿಯಾದವು.
ಇದೇ ವೇಳೆ ಎಸ್ ಬ್ಯಾಂಕ್, ಎಚ್ ಸಿ ಎಲ್ ಟೆಕ್, ಸನ್ ಫಾರ್ಮಾ, ಇನ್ಫೋಸಿಸ್, ಐಟಿಸಿ, ವೇದಾಂತ ಮತ್ತು ಪವರ್ ಗ್ರಿಡ್ ಶೇರುಗಳು ಶೇ.6ರ ವರೆಗಿನ ಏರಿಕೆಯನ್ನು ಕಂಡವು.
ಬ್ರೆಂಟ್ ಅಂತಾರಾಷ್ಟ್ರೀಯ ಕಚ್ಚಾ ತೈಲ ಶೇ.0.06 ಏರಿಕೆಯನ್ನು ದಾಖಲಿಸಿ ಬ್ಯಾರಲ್ ಗೆ 64.27 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.