ಮುಂಬಯಿ : ನಿರಂತರ ಎರಡನೇ ದಿನ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಮುನ್ನಡೆ ಸಾಧಿಸಿದೆ. ಡಾಲರ್ ಎದುರು ರೂಪಾಯಿ ಕೊಂಚ ಮಟ್ಟಿನ ಚೇತರಿಕೆಯನ್ನು ದಾಖಲಿಸಿರುವುದು, ದೇಶೀಯ ಹೂಡಿಕೆದಾರರು ಮುಂಚೂಣಿ ಶೇರುಗಳ ಖರೀದಿಯಲ್ಲಿ ತೊಡಗಿಕೊಂಡಿರುವುದು ಮತ್ತು ಕಚ್ಚಾ ತೈಲ ಬೆಲೆ ತಲ್ಲಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವುದು ಇವೇ ಮೊದಲಾದ ಕಾರಣಗಳು ಮುಂಬಯಿ ಶೇರು ಮಾರಕಟ್ಟೆಯ ಮುನ್ನಡೆಗೆ ಕಾರಣವಾಗಿವೆ.
ಇಂದು ಶುಕ್ರವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 147.01 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು ಕೊನೆಗೊಳಿಸಿದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 52.20 ಅಂಕಗಳ ಮುನ್ನಡೆಯೊಂದಿಗೆ ದಿನದ ವಹಿವಾಟನ್ನು 11,603 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಸಮಾಪನಗೊಳಿಸಿದೆ. ನಿನ್ನೆ ಗುರುವಾರದ ವಹಿವಾಟನ್ನು ಸೆನ್ಸೆಕ್ಸ್ 25 ಅಂಕಗಳ ಮುನ್ನಡೆಯೊಂದಿಗೆ ಕೊನೆಗೊಳಿಸಿತ್ತು.
ಟಾಪ್ ಗೇನರ್‌ಗಳು : ಹೀರೋ ಮೋಟೋ ಕಾರ್ಪ್, ಬಜಾಜ್ ಆಟೋ, ಭಾರ್ತಿ ಏರ್‌ಟೆಲ್, ಲೂಪಿನ್, ಮಹೀಂದ್ರ. ಟಾಪ್ ಲೂಸರ್‌ಗಳು: ಎಸ್ ಬ್ಯಾಂಕ್, ಸನ್ ಫಾರ್ಮಾ, ಅದಾನಿ ಪೋರ್ಟ್, ಎಚ್ ಡಿ ಎಫ್ ಸಿ, ಪವರ್ ಗ್ರಿಡ್.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,907 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,553 ಶೇರುಗಳು ಮುನ್ನಡೆ ಸಾಧಿಸಿದವು; 1,168 ಶೇರುಗಳು ಹಿನ್ನಡೆ ಕಂಡವು; 186 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಡಾಲರ್ ಎದುರು ರೂಪಾಯಿ ಇಂದು ವಹಿವಾಟಿನ ನಡುವೆ 29 ಪೈಸೆಗಳ ಚೇತರಿಕೆಯನ್ನು ಕಂಡು 71.70 ರೂ. ಮಟ್ಟಕ್ಕೆ ಏರಿರುವುದು ಶೇರು ಪೇಟೆಗೆ ಉತ್ತೇಜನ ನೀಡಿತು. ರೂಪಾಯಿ ನಿನ್ನೆ ಗುರವಾರ 72.11 ರೂ.ಗೆ ಕುಸಿದು ಹೊಸ ಸಾರ್ವಕಾಲಿಕ ತಳಮಟ್ಟವನ್ನು ಕಂಡಿತ್ತು.