Advertisement
ಈ ಚಿತ್ರವನ್ನು ಗುರುದೇಶಪಾಂಡೆ ನಿರ್ದೇಶಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹಿಟ್ ಆಗಿದ್ದು, ಆ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ. “ಇವತ್ತು ಒಂದು ಸಿನಿಮಾದಲ್ಲಿ ಹತ್ತು ಹಾಡುಗಳನ್ನು ಕೊಡೋದು ಸುಲಭದ ಕೆಲಸವಲ್ಲ. ಜೊತೆಗೆ ಅಷ್ಟೂ ಹಾಡುಗಳನ್ನು ಚಿತ್ರೀಕರಿಸೋದು ಒಂದು ಸಾಹಸ. ಆ ನಿಟ್ಟಿನಲ್ಲಿ ನಮ್ಮ ನಿರ್ಮಾಪಕರು ಯಾವುದಕ್ಕೂ ಹಿಂದೇಟು ಹಾಕದೇ, ಅದ್ಧೂರಿ ಸೆಟ್ ಹಾಕಿ, ಕಲರ್‌ಫುಲ್ ಆಗಿ ಹಾಡುಗಳನ್ನು ಚಿತ್ರೀಕರಿಸಿದ್ದಾರೆ. ಇವತ್ತು ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂದರೆ ಅದಕ್ಕೆ ಕಾರಣ ನಿರ್ಮಾಪಕರು. ಬಹುಶಃ ಒಬ್ಬ ಹೊಸ ಹುಡುಗನ ಲಾಂಚ್‌ಗೆ ಇಷ್ಟೊಂದು ದೊಡ್ಡ ಬಜೆಟ್ ಕೊಡೋದು “ಜಾಗ್ವಾರ್’ ನಂತರ ಈ ಸಿನಿಮಾನೇ ಇರಬೇಕು’ ಎನ್ನುತ್ತಾ ನಾಯಕ ಸೇರಿದಂತೆ ಎಲ್ಲರ ಬಗ್ಗೆ ಮಾತನಾಡಿದರು. ಜೊತೆಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಸಿನಿಮಾ ಪ್ರೀತಿ, ತಾಳ್ಮೆಯ ಬಗ್ಗೆಯೂ ಮಾತನಾಡಿದರು ಗುರು. ಇನ್ನು, ಇವತ್ತಿನ ಯುವಕರು ರ್ಯಾಪ್ ಸೇರಿದಂತೆ ಮಾಡರ್ನ್ ಹಾಡುಗಳ ಮೊರೆ ಹೋಗುತ್ತಿರುವ ಸಂದರ್ಭದಲ್ಲಿ ಅವರಿಗೆ ನಮ್ಮ ನೆಲದ, ಸಂಸ್ಕೃತಿಯ ಹಾಡುಗಳನ್ನು ಕೇಳಿಸಬೇಕೆಂಬ ಕಾರಣಕ್ಕೆ ವಚನ ಹಾಗೂ ನಮ್ಮ ಕವಿಗಳ ಹಾಡುಗಳನ್ನು ಬಳಸಿಕೊಂಡಿದ್ದಾಗಿ ಹೇಳಿದರು ಗುರುದೇಶಪಾಂಡೆ.
ನಾಯಕ ಶ್ರೇಯಸ್ ಕೂಡಾ ನಿರ್ಮಾಪಕರ ವಿಶ್ವಾಸ, ಗುರುದೇಶಪಾಂಡೆ ಶ್ರಮ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಖುಷಿಯಿಂದ ಹಂಚಿಕೊಂಡರು. ನಿರ್ಮಾಪಕ ಕೆ.ಮಂಜು ಅವರಿಗೆ ಚಿತ್ರದ ಬಗ್ಗೆ ಖುಷಿ ಇದೆ. ಜೊತೆಗೆ ನಿರ್ಮಾಪಕ ರಮೇಶ್ ಅವರ ದೊಡ್ಡ ಗುಣದ ಬಗ್ಗೆ ಮೆಚ್ಚುಗೆ ಇದೆ. “ಈ ಸಿನಿಮಾಕ್ಕೆ ನಾನು ಒಂದು ರೂಪಾಯಿ ಖರ್ಚು ಮಾಡಿಲ್ಲ. ಯಾವುದೋ ಒಂದರ ಕಾಸು ಕೊಡೋಕೆ ಮುಂದಾದೆ. ಆಗಲೂ ರಮೇಶ್ ಬಿಡಲಿಲ್ಲ. ಬೇರೆಯವರಾದರೆ ಅವರ ಮಗನ ಲಾಂಚ್ ಕೊಟ್ಟರೆ ಕೊಡಲಿ ಎಂದು ಸುಮ್ಮನಿರುತ್ತಿದ್ದರು. ಆದರೆ ರಮೇಶ್ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ’ ಎಂದ ಮಂಜು, ಮಗ ಶ್ರೇಯಸ್ ಯಾವತ್ತಿಗೂ ರಮೇಶ್ ಅವರಿಗೆ ಋಣಿಯಾಗಿರಬೇಕು ಎಂದರು. ಚಿತ್ರದ ನಾಯಕಿ ನಿಶ್ವಿಕಾ, ಸಂಗೀತ ನಿರ್ದೇಶಕ ಅಜನೀಶ್ ಸೇರಿದಂತೆ ಇಡೀ ಚಿತ್ರತಂಡ ಸಂತಸ ಹಂಚಿಕೊಂಡಿತು.