Advertisement
ಬೆಂಗಳೂರು: ರಾಜ್ಯ ಬಿಜೆಪಿಯ ಎರಡು ಬಣಗಳ ನಡುವೆ ಹೊಂದಾಣಿಕೆ ತರುವುದು ಬಿಜೆಪಿ ವರಿಷ್ಠರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಸದ್ಯಕ್ಕೆ “ಕೊಡು-ಬಿಡು’ ತಂತ್ರಕ್ಕೆ ಶರಣಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಯ ಬೇಡಿಕೆಯನ್ನು ತಿರಸ್ಕರಿಸಿರುವ ವರಿಷ್ಠರು ಕೋರ್ ಕಮಿಟಿ ಪುನಾರಚನೆ ಹಾಗೂ ಸಂಘಟನ ಪ್ರಧಾನ ಕಾರ್ಯದರ್ಶಿ ನೇಮಕಕ್ಕೆ ಒಪ್ಪಿದ್ದಾರೆ. ಈ ಮೂಲಕ ಭಿನ್ನರ ಬಣದ ಬೇಡಿಕೆಗೆ ವರಿಷ್ಠರು ಭಾಗಶಃ ಒಪ್ಪಿದಂತಾಗಿದೆ.
ಸಭೆಯ ಬಳಿಕ ಭಿನ್ನರ ಬಣದ ಮುಖಂಡರೊಬ್ಬರಿಗೆ ರಾಜ್ಯ ಬಿಜೆಪಿಯ ಸುಧಾರಣೆಗಾಗಿ “ನಿಮ್ಮ ಎರಡು ಸಲಹೆಗಳನ್ನು ಬರೆದುಕೊಡಿ’ ಎಂದು ಸಂಘದ ಹಿರಿಯರು ಸೂಚಿಸಿದ್ದರು. “ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ ಮಾಡುವುದು’ ಎಂಬುದು ಎರಡು ಸಲಹೆಗಳ ಪೈಕಿ ಮೊದಲನೆಯದಾಗಿತ್ತು. ಇದಕ್ಕೆ ಕಡ್ಡಿ ತುಂಡು ಮಾಡಿದಂತೆ “ಅಸಾಧ್ಯ’ ಎಂಬ ಉತ್ತರ ಕಳುಹಿಸಲಾಗಿದೆ. ಈ ಮೂಲಕ ವಿಜಯೇಂದ್ರ ಅವರ ಬದಲಾವಣೆಯನ್ನು ಬಯಸುತ್ತಿದ್ದವರಿಗೆ ಹೊಂದಿಕೊಂಡು ಹೋಗಿ ಎಂಬ ಸಂದೇಶವನ್ನು ವರಿಷ್ಠರು ಹಾಗೂ ಸಂಘ ನೀಡಿದಂತಾಗಿದೆ. ಸದ್ಯಕ್ಕೆ ಈ ಉತ್ತರ ವಿಜಯೇಂದ್ರ ಬಣದಲ್ಲಿ “ಸಂತೋಷ’ ಮೂಡಿಸಿದೆ.
Related Articles
ಇವೆಲ್ಲವುಗಳ ಮಧ್ಯೆ ಪಕ್ಷದ ವ್ಯವಸ್ಥೆ ಸರಿಪಡಿಸುವುದಕ್ಕಾಗಿ ಕೋರ್ ಕಮಿಟಿ ಪುನಾರಚನೆಗೆ ವರಿಷ್ಠರು ಹಸುರು ನಿಶಾನೆ ತೋರಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳು ಖಚಿತಪಡಿಸಿವೆ. ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರು ಹಾಲಿ ಕೋರ್ ಕಮಿಟಿ ಸದಸ್ಯರ ಪಟ್ಟಿಯನ್ನು ತರಿಸಿಕೊಂಡಿದ್ದಾರೆ. ಪ್ರದೇಶ ಹಾಗೂ ಜಾತಿ ಸಮೀಕರಣದ ಆಧಾರದ ಮೇಲೆ ಅತೀ ಶೀಘ್ರದಲ್ಲೇ ಪರಿಷ್ಕೃತ ಪಟ್ಟಿ ಬಿಡುಗಡೆಯ ಭರವಸೆ ನೀಡಲಾಗಿದೆ. ಈ ಸಮಿತಿಯಲ್ಲಿ ನಿರೀಕ್ಷೆಯಂತೆ ವಿಜಯೇಂದ್ರ ವಿರೋಧಿ ಬಣಕ್ಕೆ ಆದ್ಯತೆ ಸಿಗುವ ಸಾಧ್ಯತೆ ಕಡಿಮೆ ಇದೆ. ಜತೆಗೆ ಸಂಘಟನ ಪ್ರಧಾನ ಕಾರ್ಯದರ್ಶಿ ನಿಯೋಜನೆಗೆ ಸಂಘದ ಹಿರಿಯರೊಬ್ಬರ ನಿಯೋಜನೆ ಪ್ರಸ್ತಾವವನ್ನು ಅಂಗೀಕರಿಸಲಾಗಿದೆ. ಈ ಮೂಲಕ ಪಕ್ಷದಲ್ಲಿ ಸಮತೋಲನ ತರುವುದಕ್ಕಾಗಿ ಸದ್ಯಕ್ಕೆ ಮಧ್ಯಮ ಮಾರ್ಗವೊಂದನ್ನು ವರಿಷ್ಠರು ಕಂಡುಕೊಂಡಂತಾಗಿದೆ.
Advertisement
ವರಿಷ್ಠರ ಸೂತ್ರವೇನು?ಪ್ರದೇಶ, ಜಾತಿ ಸಮೀಕರಣದ ಮೇಲೆ ಕೋರ್ ಕಮಿಟಿ ರಚನೆ
ಸಂಘಟನಾ ಕಾರ್ಯದರ್ಶಿ ಹುದ್ದೆಗೆ ಸಂಘದ ಹಿರಿಯರ ನಿಯೋಜನೆ
ಡಿಸೆಂಬರ್‌ನಲ್ಲಿ ಮತ್ತೂಂದು “ಆಂತರಿಕ ಮಂಥನ’ ಸಾಧ್ಯತೆ
ಹೊಂದಿಕೊಂಡು ಹೋಗುವಂತೆ ವರಿಷ್ಠರು, ಸಂಘ ದ ಸಲಹೆ
ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಆದ್ಯತೆ ನೀಡಲು ಸೂಚನೆ ಸಿ.ಡಿ. ಬಿಡುಗಡೆಯಿಂದ ರಮೇಶ್ ಜಾರಕಿಹೊಳಿ ಅವರಿಗೆ ಭಾರೀ ಅವಮಾನವಾಗಿದೆ. ಇದರ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇದ್ದಾರೆ ಎಂಬ ಸಿಟ್ಟು ರಮೇಶ್ ಜಾರಕಿಹೊಳಿ ಅವರಿಗಿದೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ.-ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಾಸಕ ಡಿಸೆಂಬರ್ ಬಳಿಕ ಮತ್ತೊಮ್ಮೆ “ಮಂಥನ’
ಸದಸ್ಯತ್ವ ಅಭಿಯಾನಕ್ಕೆ ಮೊದಲ ಆದ್ಯತೆ ನೀಡುವಂತೆ ಬಿಜೆಪಿಯ ವರಿಷ್ಠರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜ್ಯಾದ್ಯಂತ ಪ್ರವಾಸವನ್ನು ಚುರುಕುಗೊಳಿಸಿದ್ದಾರೆ. ಸದಸ್ಯತ್ವ ಅಭಿಯಾನದ ಬಳಿಕ ಡಿಸೆಂಬರ್ ತಿಂಗಳಲ್ಲಿ ಮತ್ತೂಂದು ಬಾರಿ “ಆಂತರಿಕ ಮಂಥನ’ ನಡೆಸುವ ಸಾಧ್ಯತೆ ಇದೆ. ಇದು ಸುಧಾರಣೆ ಮಾಡಿಕೊಳ್ಳುವುದಕ್ಕಾಗಿ ಎರಡು ಬಣಗಳಿಗೆ ನೀಡಿದ ಅಂತಿಮ ಗಡುವು ಎಂದೇ ಮೂಲಗಳು ತಿಳಿಸಿವೆ.