ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದ್ದರೂ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿರೋಧ ತೋರದೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜೊತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ನ ಕೆಲ ಹಿರಿಯ ಶಾಸಕರು ಎಐಸಿಸಿ ನಾಯಕರಿಗೆ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ, ಮಂಡಳಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಅನಗತ್ಯ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಇದರಿಂದ ಸರ್ಕಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅಧಿಕಾರ ಇಲ್ಲದಂತಾಗಿದೆ. ಸಂಪುಟ ವಿಸ್ತರಣೆಗೂ ಅನಗತ್ಯ ಕಾರಣ ಹೇಳಿ ಕಾಲಹರಣ ಮಾಡುತ್ತಿರುವುದಕ್ಕೂ ಸಿದ್ದರಾಮಯ್ಯ ಅವರೇ ಕಾರಣ ಎಂಬ ಆಕ್ರೋಶ ಕೆಲ ಹಿರಿಯ ಶಾಸಕರಿಗಿದೆ. ಈ ಬಗ್ಗೆ ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿಗೆ ತೆರಳಿದರೆ, ಗಂಟೆ ಗಟ್ಟಲೆ ಕಾಯಿಸಿ ಭೇಟಿಯಾಗದೇ ಕಳುಹಿಸುತ್ತಾರೆ. ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲಿ ಜೆಡಿಎಸ್‌ನಿಂದ ಸೋತಿರುವ ಅಭ್ಯರ್ಥಿಗಳು ಕೆಲಸ ಮಾಡಿಸುತ್ತಿರುವುದರಿಂದ ಹಾಲಿ ಶಾಸಕರಿಗೆ ಬೆಲೆ ಇಲ್ಲದಂತಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಅವರ ಗಮನಕ್ಕೆ ತಂದರೂ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡುವ ಭರವಸೆ ನೀಡುತ್ತಾರೆ. ಆದರೆ, ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ. ಹೀಗಾಗಿ ಈ ಕುರಿತು ಹೈ ಕಮಾಂಡ್ ಗಮನಕ್ಕೆ ತರಲು ಅತೃಪ್ತ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಆರಂಭದಲ್ಲಿಯೇ ಸಂಪುಟ ವಿಸ್ತರಣೆಯಲ್ಲಿ ಕಡೆಗಣಿಸ್ಪಟ್ಟಿದ್ದ ಅನೇಕ ಶಾಸಕರು ಮಾಜಿ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಪಕ್ಷದ ನಾಯಕರ ವಿರುದ್ಧ ಬಂಡಾಯ ಸಾರಿದ್ದರು. ನಂತರ ಎಚ್.ಕೆ. ಪಾಟೀಲ್ ಅವರೊಂದಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾತುಕತೆ ನಡೆಸಿದ ನಂತರ ಎಲ್ಲರೂ ಶಾಂತವಾಗಿದ್ದರು.
ಈಗ ಸರ್ಕಾರದ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಯಾವುದೇ ರೀತಿಯ ಮಾನ್ಯತೆ ದೊರೆಯದಿದ್ದರೂ, ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಮೌನ ವಹಿಸಿರುವುದು ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ. ಸಿದ್ದರಾಮಯ್ಯ ಅವರ ನಡೆ ಸಂಶಯಕ್ಕೆ ಕಾರಣವಾಗಿದ್ದು, ಇದನ್ನು ಶೀಘ್ರವೇ ಸರಿಪಡಿಸಬೇಕು ಎಂದು ಹೈ ಕಮಾಂಡ್ ನಾಯಕರಿಗೆ ಒತ್ತಡ ಹೇರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ಪಕ್ಷದ ಇನ್ನೊಂದು ಮೂಲಗಳ ಪ್ರಕಾರ ಬೆಳಗಾವಿ ಅಧಿವೇಶನಕ್ಕೂ ಮುನ್ನವೇ ಸಚಿವ ಸಂಪುಟ ವಿಸ್ತರಣೆಗೆ ರಾಜ್ಯ ನಾಯಕರು ಕಸರತ್ತು ಆರಂಭಿಸಿರುವುದರಿಂದ ಸಚಿವಾಕಾಂಕ್ಷಿಗಳು ಸಂಪುಟ ಸೇರಲು ಹೈ ಕಮಾಂಡ್ ನಾಯಕರ ಮೂಲಕ ಒತ್ತಡ ಹೇರಲು ದೆಹಲಿಗೆ ತೆರಳುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರ ವಿರುದ್ಧ ದೂರು ನೀಡಲು ತೆರಳುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂಬ ಮಾತು ಕೇಳಿ ಬರುತ್ತಿದೆ.