Advertisement

ಕಾಂಗ್ರೆಸ್ ಗೆ ಮುದ್ದಹನುಮೇಗೌಡ ಗುಡ್ ಬೈ : ಡಿಕೆ ಸೋದರ ಸಂಬಂಧಿ ವಿರುದ್ಧ ಸ್ಪರ್ಧೆ

02:06 PM Sep 01, 2022 | Team Udayavani |

ಬೆಂಗಳೂರು: ಕಾಂಗ್ರೆಸ್ ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಬಿಡುಗಡೆ ಮಾಡಿ, ಪಕ್ಷದ ಜತೆಗೆ ಮುಂದುವರಿಯಲು ಸಾಧ್ಯವೇ ಇಲ್ಲ ಎಂದು ಮಾಜಿ ಸಂಸದ ಮುದ್ದಹನುಮೇಗೌಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ‌ ಮಾಡಿದ್ದಾರೆ.

Advertisement

ಕಾಂಗ್ರೆಸ್ ಸಾಂಗತ್ಯದಿಂದ ದೂರವಿದ್ದ ಅವರು ಗುರುವಾರ ಕೆಪಿಸಿಸಿ ಅಧ್ಯಕ್ಷರ ಭೇಟಿ‌ ಮಾಡಿ ಈ‌ ಮನವಿ ಸಲ್ಲಿಸುವುದರೊಂದಿಗೆ‌ ಕಾಂಗ್ರೆಸ್ ನ ಇನ್ನೊಂದು ಹಿರಿಯ ಹುದ್ದರಿ ಪತನವಾದಂತಾಗಿದೆ.

ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಕೇಳಿದ್ದೇನೆ. ಪಕ್ಷ ಬಿಡಬೇಕಾದರೆ ನಾನು ಕಾರಣವಾಗಿರಬೇಕು ಇಲ್ಲವೇ ಪಕ್ಷ ಕಾರಣವಾಗಿರಬೇಕು. ಅದು ನನ್ನ ಕಡೆಯಿಂದ ಆಗಿದ್ದರೆ ಪಕ್ಷ ಸ್ಪಷ್ಟವಾಗಿ ಹೇಳಬೇಕು. ಒಂದು ರಾಷ್ಟ್ರೀಯ ಪಕ್ಷ ಬಿಡಲು ಬಲವಾದ ಕಾರಣದಿಂದ ಇರಬೇಕು ತಾನೇ? ಎಂದು ಪ್ರಶ್ನಿಸಿದ್ದಾರೆ.

ನಾಯಕರನ್ನು ಭೇಟಿ ಮಾಡಿ ನನ್ನ ಸ್ಪಷ್ಟ ನಿರ್ಧಾರವನ್ನು ತಿಳಿಸಿದ್ದೇನೆ. 1989ರಲ್ಲಿ ಕಾಂಗ್ರೆಸ್ ಬಿ ಫಾರಂ ಕೊಟ್ಟು ನಂತರ ಬೇರೆಯವರಿಗೆ ಕೊಟ್ಟಿದ್ದರು. ನಂತರ 2019ರಲ್ಲಿ ಹಾಲಿ ಸಂಸದನಾಗಿದ್ದರೂ, ಸ್ಪರ್ಧೆಗೆ ಅವಕಾಶ ಕೊಡಲಿಲ್ಲ. ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವುದನ್ನು ತಪ್ಪಿಸಲಾಗಿದೆ. ನಾನು ಅತ್ಯಂತ ಕ್ರಿಯಾಶೀಲನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷಕ್ಕೆ ನನ್ನದೇ ಆದ ಅಳಿಲು ಸೇವೆ ಸಲ್ಲಿಸಿದ್ದೇನೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನನ್ನ ಸೇವೆಯೂ ಇದೆ. ನನ್ನ ಕ್ರಿಯಾಶೀಲ ರಾಜಕೀಯ ನಿಂತಿಲ್ಲ. ಪಕ್ಷಕ್ಕೆ  ನನ್ನ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಹತ್ಯೆ ಪ್ರಕರಣ :ಸೋನಾಲಿ ಪೋಗಟ್ ಹಿಸಾರ್ ನಿವಾಸದಲ್ಲಿ ಪರಿಶೀಲನೆ

Advertisement

ಸಿದ್ದರಾಮಯ್ಯ ಪಕ್ಷ ತೊರೆಯುವ ನಿರ್ಧಾರ ಮಾಡಬೇಡಿ ಎಂದು ಹೇಳಿದ್ದಾರೆ. ಆದರೆ, ಪಕ್ಷದಿಂದ ಬಿಡುಗಡೆ ಮಾಡಿ ಎಂದು ಕೇಳಿದ್ದೇನೆ. ಇಷ್ಟು ವರ್ಷ ನಡೆದ ರಾಜಕೀಯ ಧೋರಣೆಗಳು ಈಗಿನ ಪರಿಸ್ಥಿತಿಗೆ ಕಾರಣ. ಪಕ್ಷ ತೊರೆಯುವ ನಿರ್ಧಾರ ಮಾಡಿದ್ದೇನೆ. ಮುಂದೆ ಒಳ್ಳೆಯ ಅವಕಾಶಗಳು ಬರಲಿದೆ ಎಂದರು.

ಕುಣಿಗಲ್ ನಲ್ಲಿ ಸ್ಪರ್ಧೆ: ಹಲವು ವರ್ಷಗಳ ಹಿಂದೆಯೇ ನಾನು ಕುಣಿಗಲ್ ಕ್ಷೇತ್ರದ ಶಾಸಕನಾಗಿದ್ದೆ. ಮುಂದಿನ ಚುನಾವಣೆಗೆ ಅಲ್ಲಿಯೇ ಸ್ಪರ್ಧಿಸಬೇಕೆಂದು ಜನ ಬಯಸಿದ್ದಾರೆ. ಅತೀ ಶೀಘ್ರದಲ್ಲೇ ಒಳ್ಳೆಯ ನಿರ್ಧಾರಕ್ಕೆ ಬರುತ್ತೇನೆ ಎಂದರು.

ಬಿಜೆಪಿಯ ಆಪರೇಷನ್ ಕಮಲ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನೇನು ಅಧಿಕಾರದಲ್ಲಿ ಇದ್ದೇನಾ ಆಪರೇಷನ್ ಮಾಡಲು? ರಣದೀಪ್ ಸಿಂಗ್ ಸುರ್ಜೇವಾಲ ಪಕ್ಷದಲ್ಲೇ ಇರುವಂತೆ ಹೇಳಿದ್ದರು. ರಾಜ್ಯಸಭಾ ಚುನಾವಣೆ ವೇಳೆ ದೂರವಾಣಿ ಕರೆ ಮಾಡಿ ಹೇಳಿದ್ದರು. ಬಳಿಕ ಏನನ್ನೂ ಮಾತನಾಡಿಲ್ಲ. ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನ್ನಾಡಲು ಬಯಸುವುದಿಲ್ಲ. ಇವತ್ತೇ ರಾಜೀನಾಮೆ ಪತ್ರವನ್ನು ಕಳುಹಿಸುತ್ತೇನೆ. ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡಲು ಈ ರೀತಿ ಮಾಡುತ್ತಿಲ್ಲ. ಮುಂದೆ ಕುಣಿಗಲ್ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ. ನನ್ನ ನಿರ್ಧಾರ ಅಚಲವಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next