Advertisement

ಕಮಲ ತೊರೆದು, ದಳ ಬಿಟ್ಟು ‘ಕೈ’ಹಿಡಿದ ಧನಂಜಯ ಕುಮಾರ್‌

09:20 PM Aug 03, 2017 | Team Udayavani |

ಬೆಂಗಳೂರು: ಭಾರತೀಯ ಜನತಾಪಕ್ಷದ ಹಿರಿಯ ನಾಯಕ, ಮಾಜೀ ಸಂಸದ ಹಾಗೂ ಬಿ.ಎಸ್‌. ಯಡ್ಯೂರಪ್ಪ ಅವರ ಪರಮಾಪ್ತ ಧನಂಜಯ ಕುಮಾರ್‌ ಅವರು ಇಂದು ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಷೆ ಸೇರ್ಪಡೆಗೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಯಡ್ಯೂರಪ್ಪ ಅವರು ಕೆ.ಜೆ.ಪಿ ಪಕ್ಷವನ್ನು ಕಟ್ಟಿದ್ದ ಸಂದರ್ಭದಲ್ಲಿ ಧನಂಜಯ ಕುಮಾರ್‌ ಅವರು ತಮ್ಮ ಮಾತೃಪಕ್ಷವನ್ನು ತೊರೆದು ಕೆಜೆಪಿಗೆ ಸೇರ್ಪಡೆಗೊಂಡಿದ್ದರು. ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಎಸ್‌ವೈ ಮರಳಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾಗ ಅತಂತ್ರ ಸ್ಥಿತಿಯಲ್ಲಿದ್ದ ಧನಂಜಯ ಕುಮಾರ್‌ ಅವರು ಜೆಡಿ(ಎಸ್‌‌) ಪಕ್ಷವನ್ನು ಸೇರಿದ್ದರು. ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಶೋಭಾ ಕರಾಂದ್ಲಾಜೆ ವಿರುದ್ಧ ಸೋತಿದ್ದರು.

Advertisement

ಬಳಿಕ ಜೆಡಿ(ಎಸ್‌) ಪಕ್ಷದಲ್ಲಿ ಮೂಲೆಗುಂಪಾಗಿದ್ದ ಧನಂಜಯ ಕುಮಾರ್‌ ಅವರು ಇತ್ತೀಚೆಗಷ್ಟೇ ತಾವು ಕಾಂಗ್ರೆಸ್‌ ಪಕ್ಷವನ್ನು ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಹಾಗೂ ಈ ಸಂಬಂಧವಾಗಿ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಮಾತುಕತೆಯನ್ನೂ ನಡೆಸಿದ್ದಾಗಿ ವರದಿಯಾಗಿತ್ತು. ಇದೀಗ ಇದಕ್ಕೆ ಪೂರಕವೆಂಬಂತೆ ಧನಂಜಯ ಕುಮಾರ್‌ ಅವರು ಗುರುವಾರದಂದು ಬೆಂಗಳೂರಿನ ಕೆ.ಪಿ.ಸಿ.ಸಿ. ಕಛೇರಿಯಲ್ಲಿ ‘ಕೈ’ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿರುವ ಡಾ.ಜಿ.ಪರಮೇಶ್ವರ್‌ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಸಹಿತ ಕಾಂಗ್ರೆಸ್‌ ಪಕ್ಷದ ಹಲವು ನಾಯಕರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಅಪಾರ ರಾಜಕೀಯ ಅನುಭವವನ್ನು ಹೊಂದಿರುವ ಧನಂಜಯ ಕುಮಾರ್‌ ಅವರು ಇದೀಗ ತಮ್ಮ ಹೊಸ ರಾಜಕೀಯ ಇನ್ನಿಂಗ್ಸ್‌ ಆರಂಭಿಸಿದ್ದು, ಅವರ ಅನುಭವಕ್ಕೆ ಕಾಂಗ್ರೆಸ್‌ ಪಕ್ಷದಲ್ಲಿ ಯಾವ ರೀತಿಯ ಮನ್ನಣೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next