ಸೋಮಾಲಿಯಾ: ಅಮೆರಿಕ ಮಿಲಿಟರಿ ಪಡೆಯ ವಿಶೇಷ ಕಾರ್ಯಾಚರಣೆಯಲ್ಲಿ ಐಸಿಸ್ ಸಂಘಟನೆಯ ಮುಖಂಡ ಸೇರಿದಂತೆ ಹತ್ತು ಮಂದಿ ಹತರಾಗಿರುವ ಘಟನೆ ಉತ್ತರ ಸೋಮಾಲಿಯಾದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮುದ್ದೇಬಿಹಾಳ: ಖೈದಿ ಸುಳಿವು ನೀಡಿದರೆ ಲಕ್ಷ ರೂ. ಬಹುಮಾನ !
ಅಮೆರಿಕದ ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಉತ್ತರ ಸೋಮಾಲಿಯಾದ ಗುಹೆಗಳಲ್ಲಿ ಅಡಗಿದ್ದ ಇಸ್ಲಾಮಿಕ್ ಸ್ಟೇಟ್ ಗ್ರೂಪ್ ನ ಭಯೋತ್ಪಾದಕರ ವಿರುದ್ಧ ಅಮೆರಿಕ ಸೇನೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಐಸಿಸ್ ಪ್ರಾದೇಶಿಕ ನಾಯಕ ಬಿಲಾಲ್ ಅಲ್ ಸುಡಾನಿ ಹತನಾಗಿರುವುದಾಗಿ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸುಡಾನಿ ಸೇರಿದಂತೆ ಸಂಘಟನೆಯ ಹತ್ತು ಮಂದಿ ಹತರಾಗಿದ್ದಾರೆಂದು ವರದಿ ವಿವರಿಸಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಆದೇಶದ ಮೇರೆಗೆ ಅಮೆರಿಕ ಸೇನೆ ಉತ್ತರ ಸೋಮಾಲಿಯಾದಲ್ಲಿ ಕಾರ್ಯಾಚರಣೆ ಕೈಗೊಂಡ ಪರಿಣಾಮ ಐಸಿಸ್ ಸಂಘಟನೆಯ ಉಗ್ರರು ಸಾವಿಗೆ ಶರಣಾಗುವಂತಾಗಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಧ್ಯಮದ ವರದಿಯ ಪ್ರಕಾರ, ಉತ್ತರ ಸೋಮಾಲಿಯಾದ ಪರ್ವತ ಪ್ರದೇಶದ ಗುಹಾಂತರ ಪ್ರದೇಶದಲ್ಲಿ ಅಡಗಿಕೊಂಡಿದ್ದ ಸುಡಾನಿ ಆಫ್ರಿಕಾ, ಇಸ್ಲಾಮಿಕ್ ಸ್ಟೇಟ್ ಖೋರ್ಸಾನ್, ಅಫ್ಘಾನಿಸ್ತಾನದಲ್ಲಿರುವ ಐಸಿಸ್ ಶಾಖೆಗಳಿಗೆ ಹಣಕಾಸು ಹಾಗೂ ಶಸ್ತ್ರಾಸ್ತ್ರ ಪೂರೈಸುತ್ತಿದ್ದ ಎಂದು ವಿವರಿಸಿದೆ.