Advertisement

ಎರಡನೇ ಡೋಸ್‌ಗೆ ಹಿರಿಯರ ಹಿಂದೇಟು

02:46 PM Jan 11, 2022 | Team Udayavani |

ಬೀದರ: ಅರವತ್ತು ಮೇಲ್ಪಟ್ಟವರಿಗೆ ಕೋವಿಡ್‌ -19 ಮುನ್ನೆಚ್ಚರಿಕೆ (ಬೂಸ್ಟರ್‌) ಡೋಸ್‌ ಲಸಿಕೆ ನೀಡುವಿಕೆಗೆ ಬೀದರ ಸೇರಿ ರಾಜ್ಯಾದ್ಯಂತ ಸರ್ಕಾರ ಚಾಲನೆ ನೀಡಿದೆ. ಆದರೆ, ಇದುವರೆಗೆ ಜಿಲ್ಲೆಯಲ್ಲಿ 32 ಸಾವಿರಕ್ಕೂ ಹೆಚ್ಚು ಹಿರಿಯ ನಾಗರಿಕರು ಎರಡನೇ ಡೋಸ್‌ ಪಡೆಯದೇ ಉಳಿದಿರುವುದು ಆರೋಗ್ಯ ಇಲಾಖೆ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.

Advertisement

ಗಡಿ ಜಿಲ್ಲೆಯಲ್ಲಿ ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು, 18ರಿಂದ 45 ವರ್ಷದೊಳಗೆ, 45 ರಿಂದ 60 ವರ್ಷದೊಳಗೆ ಮತ್ತು 60 ವರ್ಷ ಮೇಲ್ಪಟ್ಟು ಹೀಗೆ ಎಲ್ಲ ವಯೋಮಾನ ಸೇರಿ ಒಟ್ಟು 12,64,918 ಜನರು ಕೋವಿಡ್‌ ಲಸಿಕೆ ಪಡೆಯಲು ಅರ್ಹರರಾಗಿದ್ದಾರೆ. ಅದರಲ್ಲಿ 1,97,400 ಮಂದಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಗುರುತಿಸಲಾಗಿದ್ದು, ಈ ಪೈಕಿ 1,93,071 ಜನ ಮೊದಲ ಡೋಸ್‌ ಮತ್ತು 1,64,871 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. ಇನ್ನೂ 32,529 ಹಿರಿಯರು 2ನೇ ಡೋಸ್‌ ವ್ಯಾಕ್ಸಿನ್‌ ಪಡೆಯಲು ಹಿಂದೇಟು ಹಾಕಿದ್ದಾರೆ. ಹಾಗಾಗಿ ಇವರನ್ನು ಗುರುತಿಸಿ ಲಸಿಕೆ ನೀಡುವುದು ಆರೋಗ್ಯ ಇಲಾಖೆ ತಲೆ ನೋವಾಗಿ ಪರಿಣಮಿಸಿದೆ.

ಮೂರನೇ ಅಲೆ ರೂಪದಲ್ಲಿ ಅಪ್ಪಳಿಸಿರುವ ಕೋವಿಡ್‌ ಸೋಂಕು ಅಪಾಯದ ಆತಂಕವನ್ನು ಸೃಷ್ಟಿಸಿದೆ. ಸೋಂಕಿನಿಂದ ಜೀವ ರಕ್ಷಣೆಗೆ ಲಸಿಕೆಯೊಂದೇ ಸದ್ಯದ ಪರಿಹಾರ. ಹೀಗಾಗಿ 18 ವರ್ಷ ಮೇಲ್ಪಟ್ಟ ಎಲ್ಲ ವಯೋಮಾನದವರಿಗೆ ಎರಡು ಡೋಸ್‌ ವ್ಯಾಕ್ಸಿನೇಶನ್‌ಗೆ ಒತ್ತು ನೀಡಿರುವ ಸರ್ಕಾರ ಈಗ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕಾರ್ತರು ಹಾಗೂ 60 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಮುನ್ನೆಚ್ಚರಿಕಾ ಲಸಿಕೆ ನೀಡುವಿಕೆಗೆ ಸೋಮವಾರದಿಂದ ಚಾಲನೆ ನೀಡಿದೆ.

2ನೇ ಡೋಸ್‌ ಪಡೆದ 39 ವಾರಗಳ ನಂತರ ಬೂಸ್ಟರ್‌ ಪಡೆಯಲು ಅರ್ಹತೆ ನಿಗದಿಪಡಿಸಿದೆ. ಆದರೆ, 2021ರ ಮಾರ್ಚ್‌ 1ರಿಂದ ಹಿರಿಯ ನಾಗರಿಕರಿಗೆ ಲಸಿಕಾಕರಣ ಶುರುವಾಗಿದ್ದರೂ ಎರಡನೇ ಡೋಸ್‌ ಇನ್ನೂ ಅಪೂರ್ಣವಾಗಿದೆ.

ಕೋವಿಶೀಲ್ಡ್‌ ಲಸಿಕೆಯ ಮೊದಲ ಡೋಸ್‌ 1,78,662 ಮತ್ತು ಎರಡನೇ ಡೋಸ್‌ 1,51,793 ಮಂದಿ ಪಡೆದಿದ್ದರೆ, ಕೋವ್ಯಾಕ್ಸಿನ್‌ ಲಸಿಕೆಯನ್ನು ಮೊದಲ ಡೋಸ್‌ 14,409 ಮತ್ತು ಎರಡನೇ ಡೋಸ್‌ 13,078 ಜನರು ಹಾಕಿಸಿಕೊಂಡಿದ್ದಾರೆ. ಜ.10ರವರೆಗೆ ಇನ್ನೂ ಜಿಲ್ಲೆಯಲ್ಲಿ 32,529 ಹಿರಿಯ ನಾಗರಿಕರು ಎರಡನೇ ಡೋಸ್‌ ವ್ಯಾಕ್ಸಿನ್‌ ಪಡೆಯುವುದು ಬಾಕಿ ಇದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Advertisement

ಕೇಂದ್ರ ಸರ್ಕಾರದ ನಿರ್ದೇಶನದಂತೆ 60 ವರ್ಷ ಮೇಲ್ಪಟ್ಟ ಅರ್ಹರಿಗೆ ಬೂಸ್ಟರ್‌ ಲಸಿಕಾಕರಣ ಶುರುವಾಗಿರುವ ಹಿನ್ನೆಲೆ 2ನೇ ಡೋಸ್‌ ನೀಡಿಕೆ ಕಾರ್ಯವನ್ನು ಚುರುಕುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ಕೆಲವರು ಇದಕ್ಕೆ ಅಸಡ್ಡೆ ತೋರುತ್ತಿದ್ದಾರೆ. ಇನ್ನೂ ಕೆಲವರು ವ್ಯಾಕ್ಸಿನೇಶನ್‌ ಪೂರ್ಣವಾಗದಿದ್ದರೂ ಸರ್ಟಿಫಿಕೇಟ್‌ ತೋರಿಸಿ ತಪ್ಪಿಸಿಕೊಳ್ಳುತ್ತಿರುವುದು ಆರೋಗ್ಯ ಸಿಬ್ಬಂದಿಗಳು ಪೇಚಿಗೆ ಸಿಲುಕುವಂತಾಗಿದೆ.

ಬೀದರ ಜಿಲ್ಲೆಯಲ್ಲಿ ಇದುವರೆಗೆ ಬಾಕಿ ಉಳಿದ ಕೋವಿಡ್‌-19 ಎರಡನೇ ಡೋಸ್‌ ನೀಡಿಕೆ ಕಾರ್ಯವನ್ನು ಚುರುಕುಗೊಳಿಸಲಾಗುತ್ತಿದೆ. ತಹಶೀಲ್ದಾರ್‌ಗಳ ನೇತೃತ್ವದಲ್ಲಿ ರಚಿಸಲಾದ ತಂಡದವರು ಪಿಎಚ್‌ ಸಿಗಳ ಮೂಲಕ ಎರಡನೇ ಡೋಸ್‌ ಪಡೆಯದೇ ಇರುವವರನ್ನು ಗುರುತಿಸಿ, ಪ್ರತಿ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಪಡೆದು ಲಸಿಕಾಕರಣ ಮಾಡಲು ಕ್ರಮ ವಹಿಸಿ ಗುರಿ ತಲುಪುವಂತೆ ಸೂಚಿಸಿದ್ದೇನೆ. -ರಾಮಚಂದ್ರನ್‌ ಆರ್‌., ಜಿಲ್ಲಾಧಿಕಾರಿ, ಬೀದರ

-ಶಶಿಕಾಂತ ಬಂಬುಳಗ

Advertisement

Udayavani is now on Telegram. Click here to join our channel and stay updated with the latest news.

Next