ಒಂದು ಕಡೆ ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರದಲ್ಲಿ ಯಾವ್ಯಾವ ಸ್ಟಾರ್‌ಗಳು ಯಾವ್ಯಾವ ಪಾತ್ರಗಳನ್ನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಹೀಗಿರುವಾಗಲೇ “ತಿಥಿ’ ಖ್ಯಾತಿಯ ಗಡ್ಡಪ್ಪ ಭೀಮನಾದರೆ, ಸೆಂಚ್ಯುರಿ ಗೌಡ್ರು ದುರ್ಯೋದನನ ಪಾತ್ರ ಮಾಡ್ತಾವ್ರಂತೆ ಎಂಬ ಪುಕಾರು ಗಾಂಧಿನಗರದಲ್ಲಿ ಎದ್ದಿದೆ. ಯಂಗ್ ಸ್ಟಾರ್‌ಗಳ ಎದುರು ಸೀನಿಯರ್ ಸ್ಟಾರ್‌ಗಳು ಎಷ್ಟೆಲ್ಲಾ ಆ್ಯಟಿಸಬಹುದು ಎಂದು ನೆನೆದರೇ ಮಜ ಇರುತ್ತದೆ.
ಆದರೆ, ಗಡ್ಡಪ್ಪ ಭೀಮನಾಗುವುದು, ಸೆಂಚ್ಯುರಿ ಗೌಡ್ರು ದುರ್ಯೋದನ ನಾಗುವುದು “ಕುರುಕ್ಷೇತ್ರ’ ಚಿತ್ರದಲ್ಲಲ್ಲ. ಅವರಿಬ್ಬರು ಪೌರಾಣಿಕ ಗೆಟಪ್ ಏರಿಸುತ್ತಿರುವುದು “ಚಿನ್ನದ ಗೊಂಬೆ’ ಎಂಬ ಹೊಸ ಚಿತ್ರದಲ್ಲಿ. ಕಳೆದ ವಾರವಷ್ಟೇ ಸೆಟ್ಟೇರಿದ ಈ ಚಿತ್ರದಲ್ಲಿ ಹೊಸಬರೋ ಹೊಸಬರು. ನಿರ್ಮಾಪಕ, ನಿರ್ದೇಶಕ, ನಾಯಕ, ನಾಯಕಿಯರು, ಛಾಯಾಗ್ರಾಹಕ, ಸಂಗೀತ ನಿರ್ದೇಶಕ ಎಲ್ಲರೂ ಹೊಸಬರೇ.
ಈ ಚಿತ್ರವನ್ನು ಕನಕಪುರದ ಕೃಷ್ಣಪ್ಪ, ತಮ್ಮ ಮಗ ಕೀರ್ತಿಕೃಷ್ಣನಿಗಾಗಿ ನಿರ್ಮಿಸುತ್ತಿದ್ದಾರೆ. ಇನ್ನು ಪಂಕಜ್ ಬಾಲನ್ ಎನ್ನುವವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಧನಶೀಲನ್ ಎನ್ನುವವರು ಸಂಗೀತ ಸಂಯೋಜಿಸಿದರೆ, ವೆಂಕಿ ದರ್ಶನ್ ಎನ್ನುವವರು ಕ್ಯಾಮೆರಾ ಹಿಡಿಯುತ್ತಿದ್ದಾರೆ. ಬರೀ ಹೊಸಬರೇ ಆಗಿಬಿಟ್ಟರೆ, ಜನರನ್ನು ಚಿತ್ರಮಂದಿರಗಳಿಗೆ ಕರೆಸುವುದು ಸುಲ¸ವಲ್ಲ ಎಂಬುದು ಕೃಷ್ಣಪ್ಪನವರಿಗೆ ಗೊತ್ತಿದೆ.
ಹಾಗಾಗಿ ಅವರು ಬರೀ ಹಿರಿಯರಷ್ಟೇ ಅಲ್ಲ, ಸಿಕ್ಕಾಪಟ್ಟೆ ಸಿನಿಮಾಗಳನ್ನು ಮಾಡುತ್ತಿರುವ “ತಿಥಿ’ ಖ್ಯಾತಿಯ ಗಡ್ಡಪ್ಪ ಮತ್ತು ಸೆಂಚ್ಯುರಿ ಗೌಡರನ್ನು ಈ ಚಿತ್ರಕ್ಕೆ ಕರೆತಂದಿದ್ದಾರೆ. ಅವರಿಬ್ಬರೂ ಹಳ್ಳಿಯ ಹಿರಿಯ ತಲೆಗಳಂತೆ. ಹಳ್ಳಿಯಲ್ಲಿ ನಾಟಕ ಮಾಡುವ ಸಂದರ್ಭ ಬಂದಾಗಿ ಗಡ್ಡಪ್ಪ ಭೀಮನಾಗಿ, ಸೆಂಚ್ಯುರಿ ಗೌಡ್ರು ದುರ್ಯೋದನನಾಗಿ ಅಬ್ಬರಿಸುತ್ತಾರಂತೆ. ಇತ್ತೀಚೆಗೆ ಅವರಿಬ್ಬರ ಪೋಟೋಶೂಟ್ ಸಹ ನಡೆದಿದೆ. “ಇಬ್ಬರೂ ನಿಲ್ಲುವುದೇ ಕಷ್ಟ. ಹಾಗಿರುವಾಗ ತೂಕದ ಒಡವೆಗಳನ್ನು ಹಾಕಿಕೊಂಡು, ಬಾರ ಹೊತ್ತಿದ್ದಾರೆ. ಆದರೂ ಲವಲವಿಕೆಯಿಂದ ಅಭಿನಯಿಸುತ್ತಾರೆ’ ಎನ್ನುತ್ತಾರೆ ಕೃಷ್ಣಪ್ಪ.