Advertisement
ಆಂಧ್ರದಲ್ಲಿ ತಮ್ಮ ಭಾಷಣದುದ್ದಕ್ಕೂ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಕಿಡಿಕಾರಿದ್ದಾರೆ. “ನಾಯ್ಡು ಅವರು ಪ್ರತಿ ಬಾರಿಯೂ ನಾನು ನಿಮಗಿಂತ ಸೀನಿಯರ್ ಎಂದು ಹೇಳುತ್ತಿರುತ್ತಾರೆ. ಅದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಅವರು ಸೀನಿಯರ್ ಆಗಿರುವುದಕ್ಕೆ ನಾನು ಅವರಿಗೆ ಕಿಂಚಿತ್ತೂ ಅಗೌರವ ತೋರಿಲ್ಲ. ಆದರೆ, ಬಾಬುಗಾರು (ನಾಯ್ಡು) ಯಾವುದರಲ್ಲಿ ಸೀನಿಯರ್ ಗೊತ್ತೇ? ಅವರು ಪಕ್ಷದಿಂದ ಪಕ್ಷಕ್ಕೆ ಹಾರುವಲ್ಲಿ ಸೀನಿಯರ್, ಹೊಸ ಮೈತ್ರಿಗೆ ಸೇರುವಲ್ಲಿ ಸೀನಿಯರ್, ಸ್ವಂತ ಮಾವನ (ಎನ್.ಟಿ. ರಾಮರಾವ್) ಬೆನ್ನಿಗೆ ಚೂರಿ ಹಾಕುವಲ್ಲಿ ಸೀನಿಯರ್. ಯಾರನ್ನು ಟೀಕಿಸುತ್ತಾರೋ ಅವರದ್ದೇ ಮಡಿಲಲ್ಲಿ ಕುಳಿತುಕೊಳ್ಳುವಂಥ, ಆಂಧ್ರಪ್ರದೇಶದ ಕನಸುಗಳನ್ನು ಧ್ವಂಸ ಮಾಡುವಂಥ ಸೀನಿಯರ್. ಇಂಥ ಸೀನಿಯರ್ ಆಗಲಿಕ್ಕೆ ನಾನಂತೂ ಇಷ್ಟಪಡುವುದಿಲ್ಲ’ ಎಂದು ಮೋದಿ ವ್ಯಂಗ್ಯವಾಡಿದ್ದಾರೆ.
Related Articles
Advertisement
ಪ್ರತಿಭಟನೆ ನಡುವೆ ಮೋದಿ ಪರ ಘೋಷಣೆಪ್ರಧಾನಿ ಮೋದಿ ಆಗಮನ ಖಂಡಿಸಿ ರವಿವಾರ ತಿರುಪುರ್‌ನಲ್ಲಿ ಎಂಡಿಎಂಕೆ ಮುಖ್ಯಸ್ಥ ವೈಕೋ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ತಮಿಳುನಾಡಿನ ಹಿತಾಸಕ್ತಿಯನ್ನು ಮೋದಿ ಗಾಳಿಗೆ ತೂರುತ್ತಿದ್ದಾರೆ ಎಂದು ವೈಕೋ ತಮ್ಮ ಭಾಷಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಲೇ, ಪ್ರತಿಭಟನಕಾರರ ನಡುವೆ ಇದ್ದ ಮಹಿಳೆಯೊಬ್ಬರು ಏಕಾಏಕಿ ಮೋದಿ ಪರ ಘೋಷಣೆ ಕೂಗಿದ ಘಟನೆ ನಡೆದಿದೆ. ಕೂಡಲೇ ಪಕ್ಷದ ಕಾರ್ಯಕರ್ತರು ಆ ಮಹಿಳೆಗೆ ಘೇರಾವ್ ಹಾಕಲು ಮುಂದಾಗಿದ್ದು, ಮಧ್ಯಪ್ರವೇಶಿಸಿದ ಪೊಲೀಸರು ಮಹಿಳೆಯನ್ನು ಹೊರಗೆ ಕರೆದೊಯ್ದರು. ಆ ಮಹಿಳೆ ಬಿಜೆಪಿ ಪದಾಧಿಕಾರಿಯಾಗಿದ್ದು, ಪ್ರತಿಭಟನಕಾರರ ನಡುವೆ ನುಸುಳಿ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ. ನೀವು ಪತ್ನಿಯನ್ನೇ ತೊರೆದವರು
ಗುಂಟೂರು ರ‍್ಯಾಲಿಯಲ್ಲಿ ತಮ್ಮನ್ನು “ಎನ್. ಲೋಕೇಶ್ ಅವರ ತಂದೆ’ ಎಂದು ಸಂಬೋಧಿಸಿದ ಪ್ರಧಾನಿ ಮೋದಿ ವಿರುದ್ಧ ಚಂದ್ರಬಾಬು ನಾಯ್ಡು ಕಿಡಿಕಾರಿದ್ದಾರೆ. ವಿಜಯವಾಡದಲ್ಲಿ ಸಾರ್ವಜನಿಕ ಸಭೆಯಲ್ಲಿ ಮೋದಿಗೆ ಪ್ರತ್ಯುತ್ತರ ನೀಡುವ ಭರದಲ್ಲಿ ನಾಯ್ಡು ಅವರು, ಮೋದಿ ಪತ್ನಿಯ ಹೆಸರನ್ನು ಎಳೆದುತಂದಿದ್ದಾರೆ. “ನಾನು ನನ್ನ ಕುಟುಂಬವನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ನೀವು ನಿಮ್ಮ ಭಾಷಣದಲ್ಲಿ ನನ್ನ ಮಗನ ಹೆಸರನ್ನು ಪ್ರಸ್ತಾವಿಸಿದ್ದೀರಿ. ಅದಕ್ಕೆ ನಾನು ನಿಮ್ಮ ಪತ್ನಿಯ ಬಗ್ಗೆ ಪ್ರಸ್ತಾವಿಸುತ್ತಿದ್ದೇನೆ. ನೀವು ನಿಮ್ಮ ಪತ್ನಿಯನ್ನೇ ಬಿಟ್ಟು ಬಂದವರು. ನಿಮಗೆ ಕುಟುಂಬ ವ್ಯವಸ್ಥೆಯ ಬಗ್ಗೆ ಸ್ವಲ್ಪವಾದರೂ ಗೌರವವಿದೆಯೇ?’ ಎಂದು ಪ್ರಶ್ನಿಸಿದ್ದಾರೆ.