Advertisement

ಟ್ರ್ಯಾಕ್ಟರ್ ರ‍್ಯಾಲಿ:ಕಾಂಗ್ರೆಸ್ ಗೆ ಸೆಡ್ಡು ಹೊಡೆಯಲು ಮುಂದಾದ ಎಸ್.ಆರ್.ಪಾಟೀಲ್

03:51 PM Apr 09, 2022 | Team Udayavani |

ಬೆಂಗಳೂರು: ತಮ್ಮನ್ನು ನಿರ್ಲಕ್ಷ್ಯ ಮಾಡಿರುವುದಕ್ಕೆ ಮಾಜಿ ಸಚಿವ ಎಸ್.ಆರ್.ಪಾಟೀಲ್ ರಾಜ್ಯ ಕಾಂಗ್ರೆಸ್ ನಾಯಕತ್ವಕ್ಕೆ ಸೆಡ್ಡು ಹೊಡೆಯಲು ಸಿದ್ದರಾಗಿದ್ದಾರೆ.

Advertisement

ಮೂಲ ಕಾಂಗ್ರೆಸ್ಸಿಗರಾಗಿ ಪಕ್ಷದ ಪರ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದರೂ, ಹಿರಿಯರಾದ ತಮ್ಮನ್ನು ಪಕ್ಷ ಕಡೆಗಣಿಸುತ್ತಿರುವುದಕ್ಕೆ ಮುನಿಸಿಕೊಂಡಿರುವ ಎಸ್.ಆರ್.ಪಾಟೀಲ್ ಪಕ್ಷದಲ್ಲಿಯೇ ಇದ್ದುಕೊಂಡು ಉತ್ತರ ಕರ್ನಾಟಕ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಪ್ರತ್ಯೇಕ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ಮುಂದಾಗಿದ್ದಾರೆ. ”ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ” ಹೆಸರಲ್ಲಿ ”ಅನ್ನದಾತನ ಕೂಗು” ಎಂಬ ಹೆಸರಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ತೀರ್ಮಾನಿಸಿದ್ದಾರೆ.

ಏಪ್ರಿಲ್ 13 ರಿಂದ 17 ರವರೆಗೆ ನಡೆಯುವ ರ‍್ಯಾಲಿ ಮಹದಾಯಿ ಹೋರಾಟದ ಬಂಡಾಯದ ನೆಲ ನವಲಗುಂದದಿಂದ ಆರಂಭವಾಗಲಿದೆ. ರ‍್ಯಾಲಿ ವೇಳೆ ಪ್ರಮುಖವಾಗಿ ಪ್ರತಿಪಕ್ಷದ ನಾಯಕ  ಸಿದ್ಧರಾಮಯ್ಯ ಅವರ ಕ್ಷೇತ್ರ ಬಾದಾಮಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಂತರ ಬಸವಣ್ಣನ ಐಕ್ಯ ಸ್ಥಳ ಕೂಡಲ ಸಂಗಮ, ಗಲಗಲಿ ಹಾಗೂ ಮುಧೋಳದಲ್ಲಿ ವಾಸ್ತವ್ಯ ಹೂಡಲಿರುವ ಹೋರಾಟಗಾರರು ಕೊನೆಯ ದಿನ ಎಸ್.ಆರ್. ಪಾಟೀಲ್ ಅವರ ತವರು ಬೀಳಗಿ ತಾಲೂಕಿನ ಬಾಡಗಂಢಗಿಯಲ್ಲಿ ಸಮಾರೋಪ ಸಮಾವೇಶ ನಡೆಸಲಿದ್ದಾರೆ.

ಈ ಟ್ರ್ಯಾಕ್ಟರ್ ರ‍್ಯಾಲಿಗೆ ಉತ್ತರ ಕರ್ನಾಟಕ ಭಾಗದ ರೈತ ಸಂಘಟನೆಗಳು, ಗುತ್ತಿ ಬಸವಣ್ಣ ಯೋಜನೆ ಹೋರಾಟ ಸಮಿತಿ, ಮಹದಾಯಿ ಹೋರಾಟಗಾರರು ಬೆಂಬಲ ಸೂಚಿಸಿ ಪಾಲ್ಗೊಳ್ಳಲಿದ್ದಾರೆ.

ಕನಿಷ್ಟ 200 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳು ರ‍್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲು ಎಸ್ ಪಾಟೀಲ್ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಮೂರು ಯೋಜನೆಗಳ ಅನುಷ್ಠಾನಕ್ಕಾಗಿ ರ‍್ಯಾಲಿ
ಉತ್ತರ ಕರ್ನಾಟಕ ಭಾಗದ ಪ್ರಮುಖ ಮೂರು ಯೋಜನೆಗಳಾದ ಮಹದಾಯಿ, ಕೃಷ್ಣಾ ಮೇಲ್ದಂಡೆ 3 ನೇ ಹಂತದ ಯೋಜನೆಗಳ ಜಾರಿ ಹಾಗೂ ತುಂಗಭದ್ರಾ ನದಿಯಲ್ಲಿ ಹೂಳು ತುಂಬಿರುವುದರಿಂದ ಕೊಪ್ಪಳದ ನವಲಿಯಲ್ಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕಾಗಿ ಟ್ರ್ಯಾಕ್ಟರ್ ರ‍್ಯಾಲಿ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಗೆ ಠಕ್ಕರ್
ಈಗಾಗಲೇ ಮೇಕೆದಾಟು ಯೋಜನೆಗೆ ಪಾದಯಾತ್ರೆ ಮಾಡಿರುವ ಕಾಂಗ್ರೆಸ್ ಉತ್ತರ ಕರ್ನಾಟಕ ಭಾಗದಲ್ಲಿ ಮಹಾದಾಯಿ ಹಾಗೂ ಕೃಷ್ಣಾ ಕೊಳ್ಳದ ಯೋಜನೆಗಳ ಅನುಷ್ಠಾನಕ್ಕೆ ಕಾಂಗ್ರೆಸ್ ಟ್ರ್ಯಾಕ್ಟರ್ ರ‍್ಯಾಲಿ ಮಾಡಲು ಸಿದ್ಧತೆ ನಡೆಸಿದೆ. ಈ ಕುರಿತು ಮಾಜಿ ನೀರಾವರಿ ಸಚಿವ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಒಂದು ಸುತ್ತಿನ ಚರ್ಚೆಯಿಂದ ನಡೆದಿದೆ. ಈ ನಡುವೆಯೇ ಎಸ್ ಆರ್. ಪಾಟೀಲ್ ಸ್ವಾಭಿಮಾನಿ ವೇದಿಕೆ ಹೆಸರಲ್ಲಿ ನಾಲ್ಕು ದಿನ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ತೀರ್ಮಾನಿಸಿರುವುದು, ತಮ್ಮನ್ನು ನಿರ್ಲಕ್ಷ್ಯ ಮಾಡಿರುವ ಕಾಂಗ್ರೆಸ್ ಗೆ ಪರೋಕ್ಷವಾಗಿ ತಮ್ಮ ಶಕ್ತಿ ತೋರಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಟಿಕೆಟ್ ತಪ್ಪಿಸಿದ್ದ ಕಾಂಗ್ರೆಸ್

ಕಾಂಗ್ರೆಸ್ ನ ಹಿರಿಯ ನಾಯಕರಾಗಿರುವ ಎಸ್. ಆರ್. ಪಾಟೀಲ್ ಅವರಿಗೆ ಇತ್ತೀಚೆಗೆ ನಡೆದ ಸ್ಥಳಿಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯ ಸದರ್ಭದಲ್ಲಿ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯಿಂದ ಟಿಕೆಟ್ ತಪ್ಪಿಸಲಾಗಿತ್ತು.

ಸತತ ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ವಿಧಾನ ಪರಿಷತ್ತಿನಲ್ಲಿ ಆಡಳಿತ ಪಕ್ಷದ ನಾಯಕರಾಗಿ, ಪ್ರತಿಪಕ್ಷದ ನಾಯಕರಾಗಿ, ಪಕ್ಷದಲ್ಲಿ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ತಮಗೆ ಟಿಕೆಟ್ ತಪ್ಪಿಸಿದ್ದು ಎಸ್. ಆರ್. ಪಾಟೀಲರ ಅಸಮಾಧಾನಕ್ಕೆ ಕಾರಣವಾಗಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಇದೇ ಕಾರಣಕ್ಕೆ ತಮ್ಮನ್ನು ನಿರ್ಲಕ್ಷ್ಯ ಮಾಡಿರುವ ಪಕ್ಷದ ನಾಯಕರಿಗೆ ಪರೋಕ್ಷವಾಗಿ ಪಕ್ಷದಲ್ಲಿದ್ದುಕೊಂಡೇ ತಮ್ಮ ಶಕ್ತಿ ತೋರಿಸಲು ಎಸ್. ಆರ್. ಪಾಟೀಲ್ ಮುಂದಾಗಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next