Advertisement

ಮಾಜಿ ಸಚಿವ ಹಿರಿಯ ಕಾಂಗ್ರೆಸ್ ನಾಯಕ ಜಿ. ರಾಮಕೃಷ್ಣ ಇನ್ನಿಲ್ಲ

11:09 PM Aug 09, 2020 | Hari Prasad |

ಕಲಬುರಗಿ: ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜಿ. ರಾಮಕೃಷ್ಣ (84) ಅವರು ಭಾನುವಾರ ಸಂಜೆ ನಿಧನರಾಗಿದ್ದಾರೆ.

Advertisement

ಕಳೆದ ಮೂರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಮಕೃಷ್ಣ ಅವರು ಇಂದು ಸಂಜೆ ನಗರದ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು.

ಮೃತರು ಮೂವರು ಪುತ್ರರು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಈ ಹಿಂದೆ ಇದ್ದ ಕಮಲಾಪುರ ಮೀಸಲು ಕ್ಷೇತ್ರದಿಂದ ಎರಡು ಸಲ ಹಾಗೂ ಈಗಿನ ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದಿಂದ ಒಂದು ಸಲ ಸೇರಿ ಮೂರು ಸಲ ಶಾಸಕರಾಗಿರುವ ಜಿ. ರಾಮಕೃಷ್ಣ ಅವರು ವೀರಪ್ಪ ಮೋಯ್ಲಿ ಸಂಪುಟದಲ್ಲಿ 1992ರಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು.

ಮೊದಲು ಕೆಇಬಿಯಲ್ಲಿ ಗುಮಾಸ್ತರಾಗಿದ್ದ ಜಿ. ರಾಮಕೃಷ್ಣ ಅವರಿಗೆ ಸಾಮಾಜಿಕ ಹಾಗೂ ರಾಜಕೀಯ ಸೇವೆಯನ್ನು ಅರಿತ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರು ರಾಜಕೀಯಕ್ಕೆ ಕರೆ ತಂದರು. ಮೊದಲಿಗೆ ಪಾಲಿಕೆ ಸದಸ್ಯರಾಗಿ ಚುನಾಯಿತರಾಗಿ ರಾಜಕೀಯ ಕ್ಷೇತ್ರದ ಸೇವೆ ಆರಂಭಿಸಿದರು.

Advertisement

ತದನಂತರ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದರು.‌ ಅದೇ ಸಂದರ್ಭದಲ್ಲಿ ಕಮಲಾಪುರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ತದನಂತರ ಎರಡನೇ ಬಾರಿಯೂ ಜಯ ಸಾಧಿಸಿ ಮಂತ್ರಿಯಾದರು.

ನಂತರ ನಡೆದ ಚುನಾವಣೆಗಳಲ್ಲಿ ಸತತವಾಗಿ ನಾಲ್ಕು ಚುನಾವಣೆಗಳಲ್ಲಿ ಪರಾಭವಗೊಂಡ ರಾಮಕೃಷ್ಣ ಅವರು 2013ರಲ್ಲಿ ಮತ್ತೆ ಎರಡು ದಶಕದ ನಂತರ ಶಾಸಕರಾಗಿ ಚುನಾಯಿತರಾದರು.

ಮಾಜಿ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್, ವೀರಪ್ಪ ಮೋಯ್ಲಿ, ಎಸ್.ಎಂ. ಕೃಷ್ಣ, ಎನ್. ಧರ್ಮಸಿಂಗ್ ಹಾಗೂ ಪಕ್ಷದ ಹಿರಿಯ ನಾಯಕ, ಹಾಲಿ ರಾಜ್ಯಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರರಿಗೆ ಆಪ್ತರಾಗಿದ್ದರು.

ಮಾಜಿ ಸಚಿವ ಜಿ. ರಾಮಕೃಷ್ಣ ನಿಧನಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ವಿರೋದ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್, ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮಡು ಸೇರಿ ಹಲವರು ತಮ್ಮ ಶೋಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next