Advertisement

ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶ

09:22 AM Aug 08, 2019 | sudhir |

ದಿಲ್ಲಿ: ಮಾಜಿ ವಿದೇಶಾಂಗ ಸಚಿವೆ, ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್(67) ಅವರು ಹೃದಯಾಘಾತದಿಂದ ಏಮ್ಸ್ ಆಸ್ಪತೆಯಲ್ಲಿ ಮಂಗಳವಾರ ರಾತ್ರಿ ವಿಧಿವಶರಾದರು.

Advertisement

ಅವರು ಕೆಲವು ತಿಂಗಳುಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ರಾತ್ರಿ ಇದ್ದಕ್ಕಿದ್ದಂತೆ ಹೃದಯಾಘಾತವಾಗಿದ್ದು, ತಕ್ಷಣ ಅವರನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ,ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ನಿತಿನ್ ಗಡ್ಕರಿ, ಹರ್ಷವರ್ಧನ್ ರಾಥೋಡ್ ಮೊದಲಾದವರು ಆಸ್ಪತ್ರೆಗೆ ತೆರಳಿದ್ದಾರೆ.

2014ರ ಎನ್ಡಿಎ ಸರಕಾರದಲ್ಲಿ ವಿದೇಶಾಂಗ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು.

2016ರಲ್ಲಿ ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸುಷ್ಮಾ ಅವರ ಆರೋಗ್ಯ ಸ್ಥಿತಿ ಆಗಿನಿಂದಲೂ ಕೊಂಚ ಏರುಪೇರಾಗಿತ್ತು. ಈ ಕಾರಣದಿಂದಲೇ ಕಳೆದ ವರ್ಷದ ನವೆಂಬರ್‌ನಲ್ಲೇ ಸಕ್ರಿಯ ರಾಜಕಾರಣದಿಂದ ದೂರ ಸರಿಯುವ ಬಗ್ಗೆ ಮಾತ ನಾಡಿದ್ದ ಸುಷ್ಮಾ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದೂ ಘೋಷಿಸಿದ್ದರು. ಅದರಂತೆ ದೂರ ಉಳಿದ ಅವರು ಹೊಸ ಸರಕಾರ ರಚನೆಯಾದ ಕೂಡಲೇ ಅಧಿಕೃತ ನಿವಾಸವನ್ನೂ ತೆರವು ಮಾಡಿ ಹೋಗಿದ್ದರು.

ಅತೀ ಚಿಕ್ಕ ವಯಸ್ಸಿಗೆ ಸಚಿವೆ
ಹರಿಯಾಣ ಸರಕಾರದಲ್ಲಿ ಅತೀ ಚಿಕ್ಕ ವಯಸ್ಸಿಗೆ ಸಚಿವೆಯಾದ ಕೀರ್ತಿ ಸುಷ್ಮಾ ಅವರದ್ದು. ಅನಂತರ ದಿಲ್ಲಿಯ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಅವರು ಅಟಲ್‌ ಬಿಹಾರಿ ವಾಜಪೇಯಿ ಅವರ ಸರಕಾರದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವೆಯಾಗಿಯೂ ಕಾರ್ಯ ನಿರ್ವಹಿಸಿದ್ದರು. 2014ರಿಂದ 2019ರ ವರೆಗೆ ಮೋದಿ ಸಂಪುಟದಲ್ಲಿ ವಿದೇಶಾಂಗ ಸಚಿವೆಯಾಗಿ ಛಾಪು ಮೂಡಿಸಿದ್ದರು. ಜಗತ್ತಿನ ಯಾವುದೇ ಮೂಲೆಯಿಂದಲೂ ಕಷ್ಟಕ್ಕೀಡಾಗಿ ಒಂದು ಟ್ವೀಟ್‌ ಮೂಲಕ ನೋವು ಹೇಳಿಕೊಂಡರೂ ಅವರ ನೆರವಿಗೆ ಧಾವಿಸುತ್ತಿದ್ದ ಸುಷ್ಮಾ, ಈ ಮೂಲಕ ಜನರ ನೆಚ್ಚಿನ ಮಂತ್ರಿ ಎಂದೇ ಖ್ಯಾತಿ ಗಳಿಸಿಕೊಂಡಿದ್ದರು.

Advertisement

ನಿಧನ ಹೊಂದುವ 3 ಗಂಟೆಗಳಿಗೆ ಮೊದಲು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ವಿಧಿ, 35ಎ ವಿಧಿಯನ್ನು ರದ್ದು ಮಾಡಿದ  ಐತಿಹಾಸಿಕ ನಿರ್ಣಯದ ಬಗ್ಗೆ ಟ್ವೀಟ್ ಮಾಡಿರುವ ಸುಷ್ಮಾ ಅವರು, ನಾನು ನನ್ನ ಜೀವನದಲ್ಲಿ ಈ ದಿನಕ್ಕಾಗಿ ಕಾಯುತ್ತಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಎಂದಿದ್ದರು.

ಸುಷ್ಮಾ ಸ್ವರಾಜ್‌ ನಡೆದು ಬಂದ ಹಾದಿ

1952ರ ಫೆಬ್ರವರಿ 14ರಂದು ಹರಿಯಾಣದ ಅಂಬಾಲಾ ಕ್ಯಾಂಟ್ನಲ್ಲಿ ಜನನ.
1957-1970: ವಿದ್ಯಾಬ್ಯಾಸ.
1970: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರ್ಪಡೆ.
1973: ಸುಪ್ರೀಂಕೋರ್ಟ್ನಲ್ಲಿ ವಕೀಲರಾಗಿ ಸೇವೆ.
1975: ಜಾರ್ಜ್ ಫರ್ನಾಂಡಿಸ್ ಅವರ ಕಾನೂನು ರಕ್ಷಣಾ ತಂಡ ಸೇರ್ಪಡೆ.
1975: ಜುಲೈ 13ರಂದು ಸ್ವರಾಜ್‌ ಕೌಶಲ್‌ ಅವರೊಂದಿಗೆ ವಿವಾಹ.
1977-82: ಹರಿಯಾಣ ವಿಧಾನಸಭೆ ಪ್ರವೇಶ.
1977-79: ಹರಿಯಾಣ ಸರಕಾರದಲ್ಲಿ ಕ್ಯಾಬಿನೆಟ್ ಮಂತ್ರಿ ಸ್ಥಾನ.
1982-90: ಹರಿಯಾಣ ವಿಧಾನಸಭೆಗೆ ಮರು ಆಯ್ಕೆ.
1982-90: ಹರಿಯಾಣ ಸರಕಾರದಲ್ಲಿ ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವೆಯಾಗಿ ಸೇವೆ.
1990-96: ರಾಜ್ಯಸಭೆ ಮೂಲಕ ಸಂಸತ್ತು ಪ್ರವೇಶ.
1996-97 : ಹನ್ನೊಂದನೇ ಲೋಕಸಭೆ ಸದಸ್ಯೆ(ಎರಡನೆಯ ಅವಧಿ).
1996: ಕೇಂದ್ರ ಸಚಿವ ಸಂಪುಟದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ.
1998-99: 12ನೇ ಲೋಕಸಭೆಗೆ ಸಂಸದೆಯಾಗಿ ಆಯ್ಕೆ.
1999: ಮಾಹಿತಿ ಮತ್ತು ಪ್ರಸಾರ ಮತ್ತು ದೂರಸಂರ್ಪಕ ಮಂತ್ರಿ.
1999: ದಿಲ್ಲಿ ಮುಖ್ಯಮಂತ್ರಿ.
1998: ದಿಲ್ಲಿ ವಿಧಾನಸಭೆಗೆ ಮರು ಆಯ್ಕೆ.
2000-06: ರಾಜ್ಯಸಭೆ ಸದಸ್ಯೆಯಾಗಿ ಆಯ್ಕೆ.
2003-04: ಸಂಸದೀಯ ವ್ಯವಹಾರಗಳ ಜತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆ.
2006-09: 5ನೇ ಅವಧಿಗೆ ರಾಜ್ಯಸಭೆ ಸದಸ್ಯೆ.
2009-14: 15ನೇ ಲೋಕಸಭೆಗೆ ಪ್ರವೇಶ.
2009: ಲೋಕಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕಿಯಾಗಿ ಆಯ್ಕೆ.
2009-14: ಲಾಲ್ ಕೃಷ್ಣ ಆಡ್ವಾಣಿ ತೆರವಾದ ಸ್ಥಾನಕ್ಕೆ ಪ್ರತಿಪಕ್ಷ ನಾಯಕಿಯಾಗಿ ಆಯ್ಕೆ.
2014: ಲೋಕಸಭೆ ಸದಸ್ಯೆಯಾಗಿ ಆಯ್ಕೆ, ವಿದೇಶಾಂಗ ಸಚಿವೆ.

Advertisement

Udayavani is now on Telegram. Click here to join our channel and stay updated with the latest news.

Next