ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಕಲಾವಿದೆ ಕೃಷ್ಣಕುಮಾರಿ (83) ಬುಧವಾರ ಮುಂಜಾನೆ ನಿಧನರಾಗಿದ್ದಾರೆ. ಮೂಳೆ ಕ್ಯಾನ್ಸರ್‌ಗೆ ತುತ್ತಾಗಿದ್ದ ಕೃಷ್ಣಕುಮಾರಿ, ಸ್ವಲ್ಪ ದಿನಗಳ ಹಿಂದೆ ಚೇತರಿಸಿಕೊಂಡಿದ್ದರೂ, ಅನಾರೋಗ್ಯ ತೀವ್ರಗೊಂಡು ಕೊನೆಯುಸಿರೆಳೆದಿದ್ದಾರೆ. 60ರ ದಶಕದ ಖ್ಯಾತ ನಟಿ ಎನಿಸಿಕೊಂಡಿದ್ದ ಕೃಷ್ಣಕುಮಾರಿ, ತೆಲುಗು ಚಿತ್ರರಂಗದಲ್ಲೇ ಹೆಚ್ಚು ಗುರುತಿಸಿಕಕೊಂಡಿದ್ದರು.
ತೆಲುಗಿನಲ್ಲಿ ಸುಮಾರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ತಮಿಳು, ಕನ್ನಡ ಸೇರಿದಂತೆ ಮಲಯಾಳಂ ಭಾಷೆಯಲ್ಲೂ ಅವರು ಅಭಿನಯಿಸಿದ್ದರು. ಆಗಿನ ಕಾಲದಲ್ಲಿ ದಕ್ಷಿಣ ಭಾರತದ ಬಹುತೇಕ ಸ್ಟಾರ್ ನಟರಿಗೆ ನಾಯಕಿಯಾಗಿದ್ದರು. ಎನ್.ಟಿ.ರಾಮರಾವ್, ಅಕ್ಕಿನೀನಿ ನಾಗೇಶ್ವರರಾವ್, ಕೃಷ್ಣಂರಾಜು, ಡಾ.ರಾಜಕುಮಾರ್, ಶಿವಾಜಿ ಗಣೇಶನ್ ಸೇರಿದಂತೆ ಅನೇಕ ನಟರ ಜತೆಗೆ ನಟಿಸಿದ್ದರು.
1951ರಲ್ಲಿ ಬಿಡುಗಡೆಯಾದ “ನವ್ವುತೆ ನವರತ್ನಾಲು’ ಚಿತ್ರದ ಮೂಲಕ ಕೃಷ್ಣಕುಮಾರಿ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ಬಳಿಕ ಅವರು ಇತರೆ ಭಾಷೆಯ ಚಿತ್ರಗಳಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಗಟ್ಟಿನೆಲೆ ಕಂಡರು. ತೆಲುಗಿನ “ಪ್ರಿಯರಾಲು’, “ಪಾತಳ ಭೈರವಿ’, “ಪಿಚ್ಚಿ ಪುಲ್ಲಯ್ಯ’, “ಬಂಗಾರು ಪಾಪ’, “ವಿನಾಯಕ ಚೌತಿ’, “ವೀರ ಕಂಕಣಂ’, “ದೀಪಾವಳಿ’, “ಭಾರ್ಯ ಬರ್ತಲು’, “ಕುಲ ಗೋತ್ರಾಲು’ ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ತೆಲುಗು ಮಂದಿಯ ಮನಗೆದ್ದಿದ್ದರು.
ಡಾ.ರಾಜಕುಮಾರ್ ಅವರೊಂದಿಗೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. “ಭಕ್ತ ಕನಕದಾಸ’, “ಆಶಾಸುಂದರಿ’, ‘ದಶಾವಾತಾರ’, “ಶ್ರೀಶೈಲ ಮಹಾತ್ಮೆ’, “ಭಕ್ತ ಕಬೀರ’, “ಸ್ವರ್ಣ ಗೌರಿ’, “ಚಂದ್ರ ಕುಮಾರ’, “ಸತಿ ಸಾವಿತ್ರಿ’ ಸೇರಿದಂತೆ ಅನೇಕ ಕನ್ನಡದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಬಹುಭಾಷಾ ಹಿರಿಯ ತಾರೆ “ಸಾಹುಕಾರ್’ ಜಾನಕಿ ಕೂಡ ಕೃಷ್ಣಕುಮಾರಿ ಅವರ ಸಹೋದರಿ.
“ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಮಾಜಿ ಸಂಪಾದ ಮತ್ತು ಪತ್ರಿಕೋದ್ಯಮಿ ಅಜಯ್ ಮೋಹನ್ ಖೈತಾನ್ ಅವರನ್ನು ಕೃಷ್ಣಕುಮಾರಿ ಮದುವೆಯಾಗಿದ್ದರು. ಪುತ್ರಿ ದೀಪಿಕಾ, ಅಳಿಯ ವಿಕ್ರಮ್ ಮತ್ತು ಮೊಮ್ಮಗ ಪವನ್ ಜೊತೆಗೆ ಕೃಷ್ಣಕುಮಾರಿ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದರು.
***
ನಮ್ಮಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಅದನ್ನು ಕೇವಲ ಮಾತುಗಳಲ್ಲಿ ಹೇಳುವುದಕ್ಕಾಗುವುದಿಲ್ಲ. ಇಬ್ಬರು ಫ್ರೆಂಡ್ಸ್‌ನಂತೆ ಇದ್ದೆವು. ಕಷ್ಟ ಸುಖಗಳಿಗೆ ಭಾಗಿಯಾಗುತ್ತಿದ್ದೆವು. ನನಗೂ ಮತ್ತು ಕೃಷ್ಣಕುಮಾರಿಗೆ ಒಂದು ವರ್ಷ ವ್ಯತ್ಯಾಸವಷ್ಟೇ. ನಾನು ಮೊದಲು ಹುಟ್ಟಿದ್ದೆ. ಆಕೆ ನಂತರ ಹುಟ್ಟಿದಳು. ಇಬ್ಬರೂ ಅನೇಕ ಚಿತ್ರಗಳಲ್ಲಿ ನಟಿಸಿದ್ದೇವೆ. ಜೀನವದಲ್ಲಿ ಸಾಕಷ್ಟು ಏರಿಳಿತ ಬಂದರೂ ಕೃಷ್ಣಕುಮಾರಿ ಎಂದಿಗೂ ತಾಳ್ಮೆ ಕಳೆದುಕೊಳ್ಳದೆ, ಸಂಯಮದಿಂದಲೇ ಇರುತ್ತಿದ್ದರು. ಯಾರಿಗೇ ಆಗಲಿ, ನೇರವಾಗಿ ಮಾತಾಡುವ ಸ್ವಭಾವದವಳಾಗಿರಲಿಲ್ಲ. ಎಷ್ಟೇ ಕಷ್ಟವಿದ್ದರೂ ಅದನ್ನು ಹೇಳಿಕೊಳ್ಳುತ್ತಿರಲಿಲ್ಲ. ಅವಳನ್ನು ಕಳೆದುಕೊಂಡಿದ್ದು, ತುಂಬಾ ದುಃಖ ತಂದಿದೆ. ನನ್ನ ಶರೀರದ ಒಂದು ಭಾಗ ಕಳೆದು ಹೋದಂತಾಗಿದೆ. ನಮ್ಮ ನಡುವೆ ಯಾವತ್ತಿಗೂ ಜಗಳ, ಕೋಪ ಇರಲಿಲ್ಲ. ತಂಗಿ, ಗೆಳತಿಯಾಗಿ ಕಳೆದ ದಿನಗಳನ್ನು ಮರೆಯೋಕೆ ಆಗುತ್ತಿಲ್ಲ.
– ಸಾಹುಕಾರ್ ಜಾನಕಿ, ಸಹೋದರಿ