ನವದೆಹಲಿ:ಏಮ್ಸ್ (ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ಆಸ್ಪತ್ರೆಯ ನಿವೃತ್ತ ಹಿರಿಯ ವೈದ್ಯ ಜಿತೇಂದ್ರ ನಾಥ್ ಪಾಂಡೆ(78ವರ್ಷ) ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಡಾ.ಪಾಂಡೆ ಅವರು ಪ್ರೀಮಿಯರ್ ಆಸ್ಪತ್ರೆಯ ಪಲ್ಮೋನೋಲಜಿ ವಿಭಾಗದ ಡೈರೆಕ್ಟರ್ ಆಗಿದ್ದು, ಕಳೆದ ಒಂದು ವಾರಗಳ ಕಾಲ ಕೋವಿಡ್ 19 ವೈರಸ್ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು.
ಮಂಗಳವಾರ ಡಾ.ಪಾಂಡೆ ಮತ್ತು ಪತ್ನಿಯನ್ನು ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ವರದಿ ಬಂದಿತ್ತು. ಆದರೆ ಇಬ್ಬರನ್ನೂ ಐಸೋಲೇಶನ್ ನಲ್ಲಿ ಇಡಲಾಗಿತ್ತು ಎಂದು ಏಮ್ಸ್ ಡೈರೆಕ್ಟರ್ ಡಾ.ರಣ್ ದೀಪ್ ಗುಲೇರಿಯಾ ಪಿಟಿಐಗೆ ತಿಳಿಸಿದ್ದಾರೆ.
ನಾವು ಅವರನ್ನು ನಿರಂತರವಾಗಿ ಪರೀಕ್ಷೆಗೊಳಪಡಿಸಿದ್ದೇವು. ಅಲ್ಲದೇ ಸೋಂಕಿನಿಂದ ಚೇತರಿಸಿಕೊಂಡಿದ್ದರು. ಶನಿವಾರ ಊಟ ಮಾಡಿ, ವಿಶ್ರಾಂತಿಗಾಗಿ ನಿದ್ದೆ ಮಾಡಿದ್ದರು. ಈ ವೇಳೆ ಹೃದಯ ಸ್ತಂಭನದಿಂದ ಸಾವನ್ನಪ್ಪಿರುವ ಸಾಧ್ಯತೆ ಇದ್ದಿರುವುದಾಗಿ ಗುಲೇರಿಯಾ ಪ್ರತಿಕ್ರಿಯೆ ನೀಡಿದ್ದಾರೆ.
ಡಾ.ಪಾಂಡೆ ಅವರ ಕುಟುಂಬಕ್ಕೆ ಹೃತ್ಪೂರ್ವಕ ಸಾಂತ್ವಾನ ಹೇಳುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, ದೀರ್ಘಕಾಲ ಸೇವೆ ನೀಡಿದ್ದ ಡಾ.ಪಾಂಡೆ ಅವರು ಏಮ್ಸ್ ನಿಂದ ನಿವೃತ್ತಿಯಾಗಿ ನಂತರ ಮತ್ತೊಂದು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೋವಿಡ್ ನಿಂದ ಅವರು ನಿಧನರಾಗಿರುವುದು ದುರದೃಷ್ಟಕರ. ದೆಹಲಿ ನಿಮಗೆ ಸೆಲ್ಯೂಟ್ ಸಲ್ಲಿಸುತ್ತಿದೆ ಸರ್ ಎಂದು ತಿಳಿಸಿದ್ದಾರೆ.