ಹಿರಿಯ ನಟಿ ಲಕ್ಷ್ಮೀ ಅವರಿಗೂ ಕನ್ನಡ ಚಿತ್ರರಂಗಕ್ಕೂ ಮೊದಲಿನಿಂದಲೂ ಒಂದು ಅವಿನಾಭಾವ ನಂಟು. 70-80ರ ದಶಕದಲ್ಲಿ ನಾಯಕ ನಟಿಯಾಗಿ ಕನ್ನಡ ಸಿನಿಪ್ರಿಯರ ಮನಗೆದ್ದ ಲಕ್ಷ್ಮೀ, ಆ ನಂತರ ಪೋಷಕ ಪಾತ್ರಗಳತ್ತ ಮುಖಮಾಡಿ ಸಿನಿಪ್ರಿಯರ ಮನದಲ್ಲಿ ಜಾಗ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಪರೂಪದ ಕಲಾವಿದೆ. ಸುಮಾರು 4ದಶಕದಿಂದ ಕನ್ನಡ ಬಹುತೇಕ ಸ್ಟಾರ್ಗಳ ಸಿನಿಮಾಗಳಲ್ಲಿ ನಾಯಕಿ ಪಾತ್ರಗಳಿಂದ ಹಿಡಿದು ಪೋಷಕ ಪಾತ್ರಗಳವರೆಗೆ ಎಲ್ಲ ಥರದ ಪಾತ್ರಗಳನ್ನೂ ನಿಭಾಯಿಸಿ ಸೈ ಎನಿಸಿಕೊಂಡ ಲಕ್ಷ್ಮೀ, ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಪರೂಪವಾಗಿದೆ ಎಂಬುದು ಅವರ
ಅಭಿಮಾನಿಗಳ ಅಳಲು. ಸುಮಾರು ನಾಲ್ಕು ವರ್ಷದ ಹಿಂದೆ ಲಕ್ಷ್ಮೀ “ಸಾಹೇಬ’ ಸಿನಿಮಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಕನ್ನಡದ ಯಾವುದೇ ಸಿನಿಮಾಗಳಲ್ಲೂ ಲಕ್ಷ್ಮೀ ಕಾಣಿಸಿಕೊಂಡಿರಲಿಲ್ಲ. ಇದೀಗ ಲಕ್ಷ್ಮೀ “ತ್ರಿಕೋನ’ ಸಿನಿಮಾದ ಮೂಲಕ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದ್ದಾರೆ.
ಬಹುಕಾಲದ ನಂತರ ಲಕ್ಷ್ಮೀ ಔಟ್ ಆ್ಯಂಡ್ ಔಟ್ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರದ “ತ್ರಿಕೋನ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಇದೇ ಏ. 1ರಂದು “ತ್ರಿಕೋನ’ ಸಿನಿಮಾ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಹಿರಿಯ ನಟಿ ಲಕ್ಷ್ಮೀ ಕನ್ನಡದಲ್ಲಿ ಬಹುತೇಕ ಸೆಂಟಿಮೆಂಟ್ ಮತ್ತು ಮಾಸ್ ಕಥಾಹಂದರದ ಸಿನಿಮಾಗಳಲ್ಲಿ ತಾಯಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೆ ಹೆಚ್ಚು. ಆದರೆ “ತ್ರಿಕೋನ’ ಸಿನಿಮಾದಲ್ಲಿ ಅವರಿಗೆ ಬೇರೆಯದ್ದೇ ಆದಂಥ ಒಂದು ಪಾತ್ರವಿದೆಯಂತೆ.
ಈ ಬಗ್ಗೆ ಮಾತನಾಡುವ “ತ್ರಿಕೋನ’ ಚಿತ್ರದ ನಿರ್ದೇಶಕ ಚಂದ್ರಕಾಂತ, “ಹಿರಿಯ ನಟಿ ಲಕ್ಷ್ಮೀ ಅವರು ಇತ್ತೀಚಿನ ವರ್ಷಗಳಲ್ಲಿ ಎಂದೂ ಕಾಣಿಸಿಕೊಂಡಿರದ ಹೊಸ ಥರದ ಪಾತ್ರವೊಂದನ್ನು ಈ ಸಿನಿಮಾದಲ್ಲಿ ನಿರ್ವಹಿಸಿದ್ದಾರೆ. ತುಂಬ ಜೀವನಾನುಭವ ಇರುವಂಥ ಫೈವ್‌ಸ್ಟಾರ್ ಹೋಟೆಲ್ ಮಾಲೀಕನ ಹೆಂಡತಿಯ ಪಾತ್ರ. ಅವರ ಪಾತ್ರದೊಂದಿಗೆ ಹಿರಿಯ ನಟ ಸುರೇಶ್ ಹೆಬ್ಳೀಕರ್ ಅವರ ಪಾತ್ರವೂ ಟ್ರಾವೆಲ್ ಆಗುತ್ತದೆ. “ಪಲ್ಲವಿ ಮತ್ತು ಅನುಪಲ್ಲವಿ’ ಸಿನಿಮಾದ ನಂತರ ಇದೇ ಮೊದಲ ಬಾರಿಗೆ ಸುರೇಶ್ ಹೆಬ್ಳೀಕರ್, ಲಕ್ಷ್ಮೀ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಕಥೆ ಮತ್ತು ಪಾತ್ರವನ್ನು ಕೇಳಿದಾಗ ತುಂಬ ಖುಷಿಯಿಂದ, ಇಷ್ಟಪಟ್ಟು ಇಂಥದ್ದೊಂದು ಪಾತ್ರವನ್ನು ಮಾಡಿದ್ದಾರೆ. ಮೆಸೇಜ್ ಇರುವಂಥ ಕಥೆಗೆ ಹೊಸ ಆಯಾಮ ಕೊಡುವಂಥ ಮತ್ತು ತುಂಬ ಗಂಭೀರವಾಗಿರುವಂಥ ಪಾತ್ರ ಅವರದ್ದು. ಲಕ್ಷ್ಮೀ ಅವರು ತಮ್ಮ ಸಹಜ ಅಭಿನಯದಿಂದ ಈ ಪಾತ್ರದ ತೂಕವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ತೆರೆಯ ಮೇಲೆ ಅವರ ಪಾತ್ರ ನೋಡುಗರಿಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ’ ಎಂದು ವಿಶ್ವಾಸದ ಮಾತುಗಳನ್ನಾಡುತ್ತಾರೆ.
ಇದನ್ನೂ ಓದಿ:ಮರ್ಡರ್ ಮಿಸ್ಟ್ರಿಯಲ್ಲಿ ಹೇಮಂತ್, ಜನಾರ್ಧನ್
ಇನ್ನು “ತ್ರಿಕೋನ’ ಚಿತ್ರದಲ್ಲಿ ಲಕ್ಷ್ಮೀ, ಸುರೇಶ್ ಹೆಬ್ಳೀಕರ್ ಅವರೊಂದಿಗೆ ಅಚ್ಯುತ್ ಕುಮಾರ್, ಸುಧಾರಾಣಿ, ಸಾಧುಕೋಕಿಲ, ರಾಜ್ ವೀರ್, ಮಾರುತೇಶ್, ಬೇಬಿ ಅದಿತಿ, ಬೇಬಿ ಹಾಸಿನಿ, ಮನದೀಪ್ ರಾಯ್ ರಾಕ್‌ಲೈನ್ ಸುಧಾಕರ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಪೊಲೀಸ್ ಪ್ರಕಿ ಪ್ರೊಡಕ್ಷನ್’ ಬ್ಯಾನರ್‌ನಲ್ಲಿ ನಿರ್ಮಾಪಕ ರಾಜಶೇಖರ್ “ತ್ರಿಕೋನ’ ಚಿತ್ರಕ್ಕೆ ಕಥೆ ಬರೆದು ನಿರ್ಮಿಸಿದ್ದಾರೆ. ಚಿತ್ರಕ್ಕೆ ಸುರೇಂದ್ರನಾಥ್ ಸಂಗೀತ ನಿರ್ದೇಶನ ಹಾಗೂ ಶ್ರೀನಿವಾಸ್ ವಿನ್ನಕೋಟ ಛಾಯಾಗ್ರಹಣವಿದೆ. ಒಟ್ಟಾರೆ ಬಹುಕಾಲದ ನಂತರ ಹೊಸಪ್ರತಿಭೆಗಳ ಸಿನಿಮಾದಲ್ಲಿ ಹೊಸ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿರುವ ಲಕ್ಷ್ಮೀ ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗುತ್ತಾರೆ ಅನ್ನೋದು ಏಪ್ರಿಲ್ ಮೊದಲ ವಾರ ಗೊತ್ತಾಗಲಿದೆ.