Advertisement

ಕನ್ನಡ ಚಿತ್ರರಂಗದ ಹಿರಿಯ ನಟ,ನಿರ್ದೇಶಕ ಕಾಶಿನಾಥ್‌ ಇನ್ನಿಲ್ಲ

09:40 AM Jan 18, 2018 | Team Udayavani |

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ,ನಿರ್ದೇಶಕ ಕಾಶಿನಾಥ್‌ ಅವರು  ಶ್ರೀಶಂಕರ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ  ಗುರುವಾರ ಇಹಲೋಕ ತ್ಯಜಿಸಿದ್ದಾರೆ.ಅವರಿಗೆ 67 ವರ್ಷ ಪ್ರಾಯವಾಗಿತ್ತು ಎಂದು ತಿಳಿದು ಬಂದಿದೆ. 

Advertisement

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾಶಿನಾಥ್‌ ಅವರನ್ನು 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. 

ಬಸವನಗುಡಿಯಲ್ಲಿರುವ ಎಪಿಎಸ್‌ ಕಾಲೇಜ್‌ ಗ್ರೌಂಡ್‌ನ‌ಲ್ಲಿ ಸಂಜೆ 4 ಗಂಟೆಯ ವರೆಗೆ ಸಾರ್ವಜನಿಕರ ಅಂತಿಮ  ದರ್ಶನಕ್ಕಾಗಿ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಳಗ್ಗೆ 7.30 ರ ವೇಳೆಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಆಸ್ಪತ್ರೆಗೆ ನಟ ಶಿವರಾಜ್‌ಕುಮಾರ್‌, ಉಪೇಂದ್ರ ಅವರು ದೌಡಾಯಿಸಿ ಅಂತಿಮ ದರ್ಶನ ಪಡೆದಿದ್ದಾರೆ. 

Advertisement

ಅಂತಿಮ ದರ್ಶನದ ಬಳಿಕ ಚಾಮರಾಜಪೇಟೆಯ ಟಿ.ಆರ್‌.ಮಿಲ್‌ ರುದ್ರಭೂಮಿಯಲ್ಲಿ ಸಂಜೆ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ. 

ಕಾಶಿನಾಥ್‌ ಅವರ ಜಯನಗರದ ನಿವಾಸಕ್ಕೆ ನಟ ಸುದೀಪ್‌,ದರ್ಶನ್‌ ಸೇರಿದಂತೆ ಅನೇಕ ನಟ, ನಟಿಯರು ಧಾವಿಸಿದ್ದು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುತ್ತಿದ್ದಾರೆ. 

ಕಾಶಿನಾಥ್‌ ಅವರು ಪುತ್ರ ನಟ ಅಲೋಕ್‌ ಕಾಶಿನಾಥ್‌ ಮತ್ತು ಪುತ್ರಿ ಅಮೃತವರ್ಷಿಣಿ ಕಾಶಿನಾಥ್‌ ಅವರನ್ನು ಅಲಿದ್ದಾರೆ. 

ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪದವಿ ಮುಗಿಸಿದ ಬಳಿಕ ಅಸೀಮಾ ಎಂಬ ಚಿತ್ರತಂಡವನ್ನು ಸೇರಿಕೊಂಡ ಕಾಶಿನಾಥ್‌ ಅವರು ಸುರೇಶ್‌ ಹೆಬ್ಳೀಕರ್‌ ಅವರ ಗರಡಿಯಲ್ಲಿ ಪಳಗಿದರು. 

1975 ರಲ್ಲಿ ಅಪರೂಪದ ಅತಿಥಿ ಚಿತ್ರವನ್ನು ನಿರ್ದೇಶಿಸಿ ಹೊಸತನವನ್ನು ಕನ್ನಡ ಚಿತ್ರರಂಗಕ್ಕೆ ತೋರಿಸಿಕೊಟ್ಟರು.

1978 ರಲ್ಲಿ ಕಾಶಿನಾಥ್‌ ನಿರ್ದೇಶಿಸಿದ್ದ ಸಸ್ಪೆನ್ಸ್‌ ಥ್ರಿಲ್ಲರ್‌ ‘ಅಪರಿಚಿತ’ ಚಿತ್ರ  ಭರ್ಜರಿ ಯಶಸ್ವಿಯಾಗಿತ್ತು ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್‌ ಹುಟ್ಟು ಹಾಕಿತ್ತು.

1984 ರಲ್ಲಿ ಕಾಶಿನಾಥ್‌ ಅವರು ನಾಯಕನಾಗಿ  ನಟಿಸಿದ್ದ ಮೊದಲ ಚಿತ್ರ ‘ಅನುಭವ’ ಭರ್ಜರಿ ಯಶಸ್ವಿಯಾಗಿದೆ. ಚಿತ್ರದಲ್ಲಿ ಉಮಾಶ್ರೀ ಮತ್ತು ಅಭಿನನಯ ಅವರು ನಾಯಕಿಯರಾಗಿ ನಟಿಸಿದ್ದರು.

ರಿಯಲ್‌ ಸ್ಟಾರ್‌ ಉಪೇಂದ್ರ,ಸಂಗೀತ ನಿರ್ದೇಶಕ ವಿ.ಮನೋಹರ್‌, ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿ  ಸೇರಿದಂತೆ ಅನೇಕ ದಿಗ್ಗಜರು ಕಾಶಿನಾಥ್‌ ಅವರ ಶಿಷ್ಯರಾಗಿದ್ದಾರೆ. 

‘ಅವಳೇ ನನ್ನ ಹೆಂಡ್ತಿ’, ‘ಹೆಂಡ್ತಿ ಎಂದರೆ ಹ್ಯಾಗಿರಬೇಕು’ ಮೊದಲಾದ ಸೂಪರ್‌ ಹಿಟ್‌ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದ ಕಾಶಿನಾಥ್‌  ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದರು.

1988 ರಲ್ಲಿ ಬಿಡುಗಡೆಯಾಗಿದ್ದ ‘ಅವಳೇ ನನ್ನ ಹೆಂಡ್ತಿ’ ಚಿತ್ರ ಹಿಂದಿಗೂ ರಿಮೇಕ್‌ ಆಗಿತ್ತು. ಹಿಂದಿಯಲ್ಲಿ ಅಮೀರ್‌ ಖಾನ್‌ ಮತ್ತು ಫ‌ರಾ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

ಕಾಶಿನಾಥ್‌ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಮತ್ತು ಲಕ್ಷಾಂತರ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next