ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ (91) ಭಾನುವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಬನಶಂಕರಿಯ ಎಕ್ಸ್‌ಎಲ್ ಕೇರ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ.
ಪುತ್ರ ಮತ್ತು ನಾಲ್ವರು ಹೆಣ್ಣು ಮಕ್ಕಳು ಸೇರಿ ಚಿತ್ರರಂಗದ ಅಪಾರ ಗೆಳೆಯರನ್ನು ಅಗಲಿದ್ದಾರೆ. ಸೋಮವಾರ ಮೃತರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಚಿತ್ರರಂಗದ ಬಹುತೇಕ ಗಣ್ಯರು, ಅಭಿಮಾನಿಗಳು ಸೇರಿ ಅಪಾರ ಬಂಧುಗಳು ದರ್ಶನ ಪಡೆದುಕೊಂಡರು. ಸಂಜೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸಿನಿ ಪಯಣ: “ಸಂಸ್ಕಾರ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಲೋಕನಾಥ್, ಈವರೆಗೆ ಸುಮಾರು 650ಕ್ಕೂ ಹೆಚ್ಚು ಚಿತ್ರಗಳಲ್ಲಿ ತರಹೇವಾರಿ ಪಾತ್ರಗಳ ಮೂಲಕ ಗಮನಸೆಳೆದಿದ್ದರು. ರಂಗಭೂಮಿಯ ಹಿನ್ನೆಲೆ ಇದ್ದ ಅವರು, ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದರು. ಅಷ್ಟೊಂದು ಚಿತ್ರಗಳಲ್ಲಿ ನಟಿಸಿದ್ದರೂ ಅವರ ಅಮೋಘ ಅಭಿನಯದಿಂದ ಗಮನಸೆಳೆದಿದ್ದು ಮಾತ್ರ “ಭೂತಯ್ಯನ ಮಗ ಅಯ್ಯು’ ಚಿತ್ರದಲ್ಲಿ.
“ನಾಗರಹಾವು’, “ಬಂಗಾರದ ಮನುಷ್ಯ’, “ದೂರದ ಬೆಟ್ಟ’, “ಶರಪಂಜರ’,”ಹೇಮಾವತಿ’,”ಬಂಗಾರದ ಪಂಜರ’,”ಹೃದಯ ಸಂಗಮ’, “ಕೃಷ್ಣ ರುಕ್ಮಿಣಿ ಸತ್ಯಭಾಮ’,”ಭಾಗ್ಯಜ್ಯೋತಿ’, “ಕೂಡಿ ಬಾಳ್ಳೋಣ’,”ಹೊಸ ನೀರು’,” ಮನೆ ಮನೆ ಕಥೆ’,”ಒಲವಿನ ಆಸರೆ’ “ಸಿಂಗಾಪುರದಲ್ಲಿ ರಾಜಕುಳ್ಳ’, “ಮಿಂಚಿನ ಓಟ’, ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಲೋಕನಾಥ್ ಅಭಿನಯಿಸಿದ್ದರು. ಅವರು “ಸಂಸ್ಕಾರ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರೂ, “ಗೆಜ್ಜೆ ಪೂಜೆ’ ಬಿಡುಗಡೆಯಾದ ಮೊದಲ ಚಿತ್ರವಾಗಿತ್ತು. 1952ರಲ್ಲಿ ಅವರು ರವಿ ಕಲಾವಿದರು ರಂಗ ಸಂಸ್ಥೆ ಸೇರಿಕೊಂಡಿದ್ದರು. ಆ ಮೂಲಕ “ಬಂಡವಾಳವಿಲ್ಲದ ಬಡಾಯಿ’ ಎಂಬ ಮೊದಲ ನಾಟಕದಲ್ಲಿ ನಟಿಸಿದ್ದರು. ನಂತರದ ದಿನಗಳಲ್ಲಿ ಹಲವು ನಾಟಕಗಳಲ್ಲಿ ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಐದು ದಶಕಕ್ಕೂ ಹೆಚ್ಚು ಸೇವೆ ಸಲ್ಲಿಸಿರುವ ಕೀರ್ತಿ ಲೋಕನಾಥ್ ಅವರದು.
ಸಂತಾಪ: ಹಿರಿಯ ನಟ ಲೋಕನಾಥ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಹಾಗೂ ಪದಾಧಿಕಾರಿಗಳು, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಾರ್ಮಿಕರ ಒಕ್ಕೂಟ ಸೇರಿ ಕನ್ನಡ ಚಿತ್ರರಂಗದ ನಟ, ನಟಿಯರು ಹಾಗೂ ವಿವಿಧ ಕ್ಷೇತ್ರದವರು ಸಂತಾಪ ಸೂಚಿಸಿದ್ದಾರೆ.
ಅಂತಿಮ ದರ್ಶನ: ರವೀಂದ್ರ ಕಲಾಕ್ಷೇತ್ರದಲ್ಲಿ ಲೋಕನಾಥ್ ಅವರ ಅಂತಿಮ ದರ್ಶನಕ್ಕೆ ಸಾವಿರಾರು ಮಂದಿ ಆಗಮಿಸಿದ್ದರು. ಹಿರಿಯ ಕಲಾವಿದರಾದ ರಾಜೇಶ್, ಜಗ್ಗೇಶ್, ರಾಘವೇಂದ್ರ ರಾಜಕುಮಾರ್, ವಿನಯಾಪ್ರಸಾದ್ ಸೇರಿದಂತೆ ಹಲವು ನಟ,ನಟಿಯರು, ತಂತ್ರಜ್ಞರು, ಒಕ್ಕೂಟದ ಕಾರ್ಮಿಕರು ಅಂತಿಮ ದರ್ಶನ ಪಡೆದರು.