ಬೆಂಗಳೂರು: ಕನ್ನಡ ಚಲಚಿತ್ರದ ಹಿರಿಯ ನಟ, ಮಾಜಿ ಸಚಿವ ರೆಬಲ್ ಸ್ಟಾರ್ ಅಂಬರೀಶ್(66) ಅನಾರೋಗ್ಯದಿಂದ ನಗರದ ವಿಕ್ರಂ ಆಸ್ಪತ್ರೆ ಯಲ್ಲಿ ಶನಿವಾರ ರಾತ್ರಿ ನಿಧನರಾಗಿದ್ದಾರೆ. ಕಿಡ್ನಿ, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.
ಹುಚ್ಚೇಗೌಡ, ಪದ್ಮಮ್ಮ ದಂಪತಿಗೆ 6ನೇ ಮಗನಾಗಿ 1952 ಮೇ 29ರಂದು ಮಂಡ್ಯ ಜೆಲ್ಲೆ ಮದ್ದೂರು ತಾಲೂಕಿನ ದೊಡ್ಡರಸನ ಕೆರೆಗ್ರಾಮದಲ್ಲಿ ಜನಿಸಿದರು. ಖ್ಯಾತ ಪೀಟಿಲು ವಾದಕ ವಿದ್ವಾನ್ ಟಿ.ಚೌಡಯ್ಯರವರ ಮೊಮ್ಮಗ. ಕನ್ನಡ ಚಿತ್ರರಂಗಕ್ಕೆ ಪುಟ್ಟಣ್ಣ ಕಣಗಾಲ್ ನಿರ್ದೇಶನದ “ನಾಗರ ಹಾವು” ಚಿತ್ರದ (ಜಲೀಲ ಪಾತ್ರದ) ಮೂಲಕ ಪಾದಾರ್ಪಣೆ ಮಾಡಿದರು.
ಮುಖ್ಯಮಂತ್ರಿ ಕುಮಾರ ಸ್ವಾಮಿ, ಡಿ.ಕೆ.ಶಿವಕುಮಾರ, ಕೆ.ಜೆ.ಜಾರ್ಜ್, ಹ್ಯಾರೀಸ್, ನಟರಾದ ಪುನೀತ್ ರಾಜ್‌ಕುಮಾರ್, ಯಶ್ ಸೇರಿದಂತೆ ಹಲವಾರು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿದರು.
ಈ ಮಧ್ಯೆ ಆಸ್ಪತ್ರೆ ಮುಂದೆ ಅಭಿಮಾನಿಗಳು ಸೇರುತ್ತಿದ್ದು, ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಸ್ವತಃ ಬೆಂಗಳೂರು ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ. ಸಿಂಗ್ ಭದ್ರತೆ ವ್ಯವಸ್ಥೆ ನೋಡುತ್ತಿದ್ದಾರೆ.