ಮಂಗಳೂರು: ನಗರದ ಕಂಪೆನಿಯೊಂದರ ಮ್ಯಾನೇಜರ್‌ಗೆ ಸಿಮೆಂಟ್ ಬಿಲ್ ಪಾವತಿಗೆ ಸಂಬಂಧಿ ಸಿದಂತೆ ಅಪರಿಚಿತ ವ್ಯಕ್ತಿಯೋರ್ವ ಕ್ಯು.ಆರ್. ಕೋಡ್ ಕಳುಹಿಸಿ ಹಂತ ಹಂತವಾಗಿ ಒಟ್ಟು 96,996 ರೂ. ವಂಚಿಸಿರುವ ಘಟನೆ ನಡೆದಿದೆ.
ಜ. 25ರಂದು ಅಪರಿಚಿತನೋರ್ವ 6900789640 ಮತ್ತು 9735403133 ಸಂಖ್ಯೆಯಿಂದ ಕರೆ ಮಾಡಿ ತಾನು ಭಾರತೀಯ ಸೇನೆಯ ಸೇವಕನಾಗಿದ್ದು ಪೀಸ್ ಪಬ್ಲಿಕ್ ಸ್ಕೂಲ್‌ನ ಕೆಲಸಕ್ಕಾಗಿ 300 ಚೀಲ ಸಿಮೆಂಟ್ ಅಗತ್ಯವಿದೆ ಎಂದು ತಿಳಿಸಿದ. ಆತನ ಗುರುತಿನ ಚೀಟಿ ಮತ್ತು ಇತರ ವಿವರಗಳನ್ನು ಮ್ಯಾನೇಜರ್‌ನ ವಾಟ್ಸ್ ಆ್ಯಪ್ ಸಂಖ್ಯೆಗೆ ಕಳುಹಿಸಿದ. ಇದನ್ನು ನಂಬಿದ ಮ್ಯಾನೇಜರ್ 300 ಚೀಲ ಸಿಮೆಂಟನ್ನು ವಾಹನದಲ್ಲಿ ತುಂಬಿಸಿ ಕಳುಹಿಸಿಕೊಟ್ಟರು.
ಅಪರಿಚಿತ ವ್ಯಕ್ತಿ ಕೆಲವು ಸಮಯದ ಅನಂತರ ಕರೆ ಮಾಡಿ ಮೊದಲಿಗೆ ಅರ್ಧ ಹಣ, ಅನಂತರ ಪೂರ್ತಿ ಹಣ ಪಾವತಿಸುವುದಾಗಿ ತಿಳಿಸಿದ. ಮ್ಯಾನೇಜರ್‌ನ ಪೋನ್ ಪೇ ಸಂಖ್ಯೆಯನ್ನು ವಾಟ್ಸ್‌ಆ್ಯಪ್ ಮೂಲಕ ಪಡೆದುಕೊಂಡ. ಅನಂತರ ಆತನ ಕ್ಯುಆರ್ ಕೋಡ್ ಅನ್ನು ಮ್ಯಾನೇಜರ್‌ನ ಫೋನ್ ಪೇ ನಂಬರ್‌ಗೆ ಕಳುಹಿಸಿದ. ಆತ ತಿಳಿಸಿದಂತೆ ಮ್ಯಾನೇಜರ್ 1 ರೂಪಾಯಿ ಯುಪಿಐ ಮುಖಾಂತರ ಪಾವತಿಸಿದರು. ಅನಂತರ ಅಪರಿಚಿತ ವ್ಯಕ್ತಿಯು 4 ಕ್ಯುಆರ್ ಕೋಡ್ ಅನ್ನು ವಾಟ್ಸ್‌ಆ್ಯಪ್ ಮೂಲಕ ಮ್ಯಾನೇಜರ್‌ಗೆ ಕಳುಹಿಸಿದ. ಮ್ಯಾನೇಜರ್ ಆ ಕ್ಯುಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿದ ಕೂಡಲೇ ಅಪರಿಚಿತ ವ್ಯಕ್ತಿ ಮ್ಯಾನೇಜರ್‌ನ ಐಡಿಎಫ್ಸಿ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 96,996 ರೂ.ಗಳನ್ನು ಆತನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಕ್ಷಾಂತರ ರೂ. ವಂಚಿಸಿದ ಸೇಲ್ಸ್‌ಮೆನ್
ಉಡುಪಿ: ಬೇರಿಂಗ್ ಕಂಪೆನಿಯೊಂದಕ್ಕೆ ಸೇಲ್ಸ್‌ಮೆನ್ ಲಕ್ಷಾಂತರ ರೂ.ವಂಚನೆ ಮಾಡಿದ ಘಟನೆ ನಡೆದಿದೆ.
ನಗರದ ಬಸ್ ನಿಲ್ದಾಣದ ಬಳಿ ಕಾರ್ಯನಿರ್ವಹಿಸುತ್ತಿರುವ ಈ ಕಂಪೆನಿಗೆ ಆರೋಪಿ ಚೇತನ್ ಕುಮಾರ್ ಎಂಬಾತ 2008ರಲ್ಲಿ ಸೇಲ್ಸ್‌ಮೆನ್ ಆಗಿ ಸೇರಿದ್ದು, ಪ್ರಸ್ತುತ ಸೇಲ್ಸ್ ಎಕ್ಸಿಕ್ಯುಟಿವ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, 2021ರಲ್ಲಿ ಸಂಸ್ಥೆಯ ಗ್ರಾಹಕರಿಂದ 8,57,336ರೂ. ಹಣವನ್ನು ಸಂಗ್ರಹಿಸಿ ಅದನ್ನು ಸಂಸ್ಥೆಗೆ ಪಾವತಿ ಮಾಡದೆ ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ವಂಚಿಸಿದ್ದಾನೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.