ಹೊಸದಿಲ್ಲಿ: ಈಗ ದೂರು ಕೊಟ್ಟು ಬಹುಮಾನ ಗೆಲ್ಲುವ ಸರದಿ! ಹೌದು. ನಿಮ್ಮ ನಗರದ ಸಾರ್ವಜನಿಕ ರಸ್ತೆಯಲ್ಲಿ ಯಾರಾದರೂ ತಮ್ಮ ಕಾರು ಅಥವಾ ಬೈಕನ್ನು “ನೋ ಪಾರ್ಕಿಂಗ್’ ಜಾಗದಲ್ಲಿ ನಿಲ್ಲಿಸಿದ್ದರೆ ಕೂಡಲೇ ಆ ವಾಹನದ ಫೋಟೋ ಕ್ಲಿಕ್ಕಿಸಿ ಸಂಚಾರಿ ಪೊಲೀಸರಿಗೆ ರವಾನಿಸಿದರೆ ಸಾಕು, ನಿಮಗೆ 500 ರೂ. ನಗದು ಬಹುಮಾನ ಸಿಗಲಿದೆ!
ಇಂಥದ್ದೊಂದು ವ್ಯವಸ್ಥೆ ದೇಶಾದ್ಯಂತ ಶೀಘ್ರವೇ ಜಾರಿಗೆ ಬರಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆ ಮಾಡುವ ಸಮಸ್ಯೆಗೆ ಕಡಿವಾಣ ಹಾಕುವ ಸಲುವಾಗಿ ಹೊಸ ವ್ಯವಸ್ಥೆ ಮತ್ತು ಕಾನೂನು ತರಲು ನಿರ್ಧರಿಸಿದ್ದೇವೆ. ನೋ ಪಾರ್ಕಿಂಗ್ ಜಾಗದಲ್ಲಿ ಅಥವಾ ರಸ್ತೆಗಳ ಮೇಲೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿದ್ದರೆ ಫೋಟೋ ಕ್ಲಿಕ್ಕಿಸಿ ಸಾರ್ವಜನಿಕರು ಸ್ಥಳೀಯ ಟ್ರಾಫಿಕ್ ಪೊಲೀಸರಿಗೆ ಸಲ್ಲಿಸಬಹುದು. ಆ ವಾಹನದ ಮಾಲಕರಿಂದ ಸಂಚಾರಿ ಪೊಲೀಸರು 1 ಸಾವಿರ ರೂ. ದಂಡ ವಸೂಲಿ ಮಾಡಿದರೆ, ಫೋಟೋ ಕಳುಹಿಸಿದ ದೂರುದಾರರಿಗೆ ಬಹುಮಾನದ ರೂಪದಲ್ಲಿ 500 ರೂ. ನೀಡಲಾಗುತ್ತದೆ. ಆಗ ನೋ ಪಾರ್ಕಿಂಗ್ ಸಮಸ್ಯೆ ತನ್ನಿಂತಾನೇ ಕಡಿಮೆಯಾಗುತ್ತದೆ ಎಂದು ಹೊಸದಿಲ್ಲಿಯಲ್ಲಿ ಗುರುವಾರ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ವಿವರಿಸಿದ್ದಾರೆ.
ಜನರು ತಮ್ಮ ವಾಹನಗಳಿಗೆ ಪಾರ್ಕಿಂಗ್ ಸ್ಥಳ ನಿರ್ಮಿಸುವ ಬದಲು ರಸ್ತೆಗಳಲ್ಲೇ ಪಾರ್ಕ್ ಮಾಡುವುದರ ಕುರಿತು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.