Advertisement
ನ. 24ರಂದು ವ್ಯಕ್ತಿಯೋರ್ವರಿಗೆ +917878422870 ನೇ ವಾಟ್ಸ್ ಆ್ಯಪ್ ನಂಬರ್ನಿಂದ ಮೆಸೇಜ್ ಬಂದಿದ್ದು, ಅದರಲ್ಲಿ VAHAN PARIVAHAN.apk ಫೈಲ್ ಇತ್ತು. ಅದನ್ನು ಡೌನ್ಲೋಡ್ ಮಾಡಿದಾಗ ಅವರ ಮೊಬೈಲ್ಗೆ 16 ಒಟಿಪಿಗಳು ಬಂದಿದ್ದವು. ಅವರು ಆ ಒಟಿಪಿಗಳನ್ನು ಯಾರಿಗೂ ಕಳಹಿಸಿರಲಿಲ್ಲ. ಅನಂತರ ಅವರ ಫ್ಲಿಪ್ಕಾರ್ಟ್ ಹಾಗೂ ಅಮೆಜಾನ್ನಲ್ಲಿ ಅವರ ಕ್ರೆಡಿಟ್ ಕಾರ್ಡ್ ಮೂಲಕ 30,400 ರೂ., ಡೆಬಿಟ್ ಕಾರ್ಡ್ ಮೂಲಕ 16,700 ರೂ. ಮತ್ತು ಪೇ ಲೇಟರ್ನಲ್ಲಿ 71,496 ರೂ. ಹಣ ವರ್ಗಾವಣೆಯಾದ ಬಗ್ಗೆ ಮೊಬೈಲ್ಗೆ ಮೆಸೇಜ್ ಬಂದಿತ್ತು. ಕೂಡಲೇ ಅವರು ತನ್ನ ಮೊಬೈಲ್ ಮೂಲಕ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಿಸಿದ್ದರು.
ಸರಕಾರದ “ಪರಿವಾಹನ್’ ಆ್ಯಪ್ನ ಹೆಸರಿನಲ್ಲಿ ಈಗ ಸೈಬರ್ ವಂಚಕರು ಹಣ ದೋಚಲು ಆರಂಭಿಸಿದ್ದಾರೆ. ಪರಿವಾಹನ್ನಲ್ಲಿ ವಾಹನ ಮಾಲಕರ ವಿವರ ಪಡೆದುಕೊಳ್ಳಬಹುದು. ವಾಹನ ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಗೂ ಅವಕಾಶವಿದೆ. ಕೆಲವು ರಾಜ್ಯಗಳಲ್ಲಿ ಪರಿವಾಹನ್ ಮೂಲಕವೇ ವಾಹನ ಚಾಲಕರ ಮೊಬೈಲ್ಗೆ ನೋಟಿಸ್, ಚಲನ್ ಕೂಡ ಬರುವ ವ್ಯವಸ್ಥೆ ಇದೆ. ಅದನ್ನೇ ಸೈಬರ್ ವಂಚಕರು ತಮ್ಮ ಕೃತ್ಯಕ್ಕೆ ಉಪಯೋಗಿಸುತ್ತಿರುವುದು ಕಂಡುಬರುತ್ತಿದೆ. ಈ ರೀತಿಯ ಪರಿವಾಹನ್ ಆ್ಯಪ್/ಲಿಂಕ್ ಅನ್ನು ಎಪಿಕೆ ಫೈಲ್ ಜತೆಗೆ ಕಳುಹಿಸುತ್ತಾರೆ. ನಂಬಿಕೆ ಬರುವಂತೆ ಮಾಡಲು ಅದರ ಜತೆಗೆ ಇ-ಚಲನ್(ನಕಲಿ) ಕೂಡ ಅಟ್ಯಾಚ್ ಮಾಡಿರುತ್ತಾರೆ. ಆ ರೀತಿಯ ಫೈಲ್ ತೆರೆದಾಗ ಎಪಿಕೆ ಫೈಲ್/ಆ್ಯಪ್ ಮೊಬೈಲ್ನಲ್ಲಿರುವ ಬ್ಯಾಂಕ್ ಸಹಿತ ಎಲ್ಲ ಮಾಹಿತಿಗಳನ್ನು ಕದಿಯುತ್ತದೆ. ಕ್ಷಣ ಮಾತ್ರದಲ್ಲಿಯೇ ವಂಚಕರು ಹಣ ವರ್ಗಾಯಿಸಿಕೊಳ್ಳುತ್ತಾರೆ.
Related Articles
ಎಪಿಕೆಯ ವಿಸ್ತೃತ ರೂಪ “ಆ್ಯಂಡ್ರಾಯ್ಡ ಪ್ಯಾಕೇಜ್ ಕಿಟ್’ .ಎಪಿಕೆ ಫೈಲ್ಗಳು ಭಾರೀ ಪವರ್ಫುಲ್. ಇವು ಮೊಬೈಲ್ನಲ್ಲಿರುವ ಗ್ಯಾಲರಿ, ಕೆಮರಾ ಮೊದಲಾದವುಗಳ ಆ್ಯಕ್ಸೆಸ್ಗೆ ಪರ್ಮಿಷನ್ ಕೇಳುವುದಿಲ್ಲ. ನೇರವಾಗಿ ಆ್ಯಕ್ಸೆಸ್ ಮಾಡಿಕೊಳ್ಳುತ್ತವೆ. ಹಾಗಾಗಿ ಇಂತಹ ಫೈಲ್ಗಳನ್ನು ತೆರೆಯಬಾರದು. ಡೌನ್ಲೋಡ್ ಮಾಡಬಾರದು. ಆ್ಯಪ್ಗ್ಳನ್ನು ಪ್ಲೇ ಸ್ಟೋರ್ ಮೂಲಕವೇ ಡೌನ್ಲೋಡ್ ಮಾಡಿಕೊಳ್ಳುವುದು ಸುರಕ್ಷಿತ. ಮೊಬೈಲ್ನ ಸೆಟ್ಟಿಂಗ್ಸ್ನಲ್ಲಿ “ಇನ್ಸ್ಟಾಲ್ ಅನ್ನೋನ್ ಆ್ಯಪ್ಸ್’ ಇರುವಲ್ಲಿ ಟಿಕ್ ಮಾರ್ಕ್ಸ್ ಹಾಕಬಾರದು. ಆಗ ಒಂದು ವೇಳೆ ಎಪಿಕೆ ಫೈಲ್ ನಮ್ಮ ಮೊಬೈಲ್ಗೆ ಬಂದರೂ ಅದನ್ನು ತೆರೆಯುವ ಮೊದಲು ನಮಗೆ ಎಚ್ಚರಿಕೆಯ ಸಂದೇಶ ತೋರುತ್ತದೆ ಎನ್ನುತ್ತಾರೆ ಸೈಬರ್ ತಂತ್ರಾಂಶಗಳ ತಜ್ಞ ಡಾ| ಅನಂತ ಪ್ರಭು ಗುರುಪುರ ಅವರು.
Advertisement
ರಕ್ಷಣೆ ಹೇಗೆ ?ಮೊಬೈಲ್ಗೆ ಬರುವ ಫೈಲ್ ಎಪಿಕೆಯಾಗಿದ್ದರೆ ಆ ಫೈಲ್ನ ಕೊನೆಯಲ್ಲಿ.apk ಎಂಬುದಾಗಿ ಇರುತ್ತದೆ. ಒಂದು ವೇಳೆ ಫೈಲ್ನ ಬದಲು ಲಿಂಕ್ ಬಂದಿದ್ದರೆ ಆಗ ಅದರಲ್ಲಿ .apk ಎಂಬುದಾಗಿ ಇರುವುದಿಲ್ಲ. ಆದರೆ ಅದು ಮೊಬೈಲ್ನಲ್ಲಿ ಡೌನ್ಲೋಡ್ ಆಗಿರುತ್ತದೆ. ಅನಂತರ ಆ ಫೈಲ್ನ ಕೊನೆಯಲ್ಲಿ.apk ಕಾಣುತ್ತದೆ. ಈ ರೀತಿ ಇರುವ ಫೈಲ್ಗಳನ್ನು ತೆರೆಯಬಾರದು ಎನ್ನುತ್ತಾರೆ ಡಾ| ಪ್ರಭು.