Advertisement

ಸಿಎಂಗಿರಿ ಭರವಸೆ ಕೊಟ್ಟಿರಲಿಲ್ಲ; ಕೇಂದ್ರ ಗೃಹ ಸಚಿವ ಅಮಿತ್‌ ಶಾ ಖಡಕ್‌ ಮಾತು

11:12 AM Nov 14, 2019 | Team Udayavani |

ಮುಂಬೈ/ನವದೆಹಲಿ:”ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ನಾವು ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಭರವಸೆ ನೀಡಿರಲಿಲ್ಲ, ದೇವೇಂದ್ರ ಫ‌ಡ್ನವೀಸ್‌ ಅವರೇ ಮುಂದಿನ ಮುಖ್ಯಮಂತ್ರಿ ಎಂದೇ ಘೋಷಣೆ ಮಾಡಿದ್ದೆವು…”

Advertisement

ಇವು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಖಡಕ್‌ ಮಾತುಗಳು. ಮಹಾರಾಷ್ಟ್ರ ಬೆಳವಣಿಗೆ ಬಗ್ಗೆ ಇದುವರೆಗೆ ಮೌನ ವಹಿಸಿದ್ದ ಅವರು ಇದೇ ಮೊದಲ ಬಾರಿಗೆ ಹೇಳಿಕೆ ನೀಡಿದ್ದು, ಶಿವಸೇನೆಯ ಯಾವುದೇ ಹೊಸ ಬೇಡಿಕೆಗಳನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ.

“ಎಎನ್‌ಐ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಹಲವಾರು ರ್ಯಾಲಿಗಳಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಗೆದ್ದರೆ ದೇವೇಂದ್ರ ಫ‌ಡ್ನವೀಸ್‌ ಅವರೇ ಮುಖ್ಯಮಂತ್ರಿ ಎಂದು ನಾನು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಲೇ ಬಂದಿದ್ದರು. ಆಗ ಇದನ್ನು ಯಾರೂ ಆಕ್ಷೇಪಿಸಲಿರಲಿಲ್ಲ. ಈಗ ಅಧಿಕಾರ ಹಂಚಿಕೆಯ ಬಗ್ಗೆ ಶಿವಸೇನೆ ಮಾತನಾಡುತ್ತಿದೆ. ಆದರೆ, ನಾವು ಅಂಥ ಯಾವುದೇ ಭರವಸೆ ನೀಡಿರಲೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸರ್ಕಾರ ರಚನೆಯ ಬಗ್ಗೆ ರಾಜ್ಯಪಾಲರು ಕಾದಿದ್ದಾರೆ. ವಿಧಾನಸಭೆಯ ಅವಧಿ ಮುಗಿದ ನಂತರವೇ ಪಕ್ಷಗಳನ್ನು ಸರ್ಕಾರ ರಚನೆಗಾಗಿ ಆಹ್ವಾನಿಸಿದ್ದಾರೆ. ಆಗ ಶಿವಸೇನೆಯಾಗಲಿ, ಎನ್‌ಸಿಪಿ-ಕಾಂಗ್ರೆಸ್‌ ಆಗಲಿ ಅಥವಾ ನಾವಾಗಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ, ಯಾವುದೇ ಪಕ್ಷದ ಬಳಿ ಶಾಸಕರ ಸಂಖ್ಯಾಬಲವಿದ್ದರೆ ಹೋಗಿ ರಾಜ್ಯಪಾಲರ ಬಳಿ ಹಕ್ಕು ಮಂಡಿಸಬಹುದು ಎಂದೂ ಸ್ಪಷ್ಟವಾಗಿ ಹೇಳಿದ್ದಾರೆ.

ಶಿವಸೇನೆಗೆ ಮೋಸ ಮಾಡಿಲ್ಲ
ನಾವು ಶಿವಸೇನೆಗೆ ಯಾವುದೇ ರೀತಿಯಲ್ಲೂ ಮೋಸ ಮಾಡಿಲ್ಲ. ನಾವು ಶಿವಸೇನೆ ಜತೆಗೇ ಸರ್ಕಾರ ಮಾಡಲು ಬಯಸಿದ್ದೆವು. ಆದರೆ, ಆಗಲಿಲ್ಲ. ನಾವೂ ಮಧ್ಯಂತರ ಚುನಾವಣೆ ಬಗ್ಗೆ ಯಾವುದೇ ಒಲವು ಹೊಂದಿಲ್ಲ ಎಂದೂ ಹೇಳಿದರು. ಇದರ ಜತೆಗೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶವನ್ನೇ ನೀಡಲಿಲ್ಲ ಎಂಬ ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಹೇಳಿಕೆ ಬಾಲಿಶವಾದದ್ದು ಎಂದು ವ್ಯಂಗ್ಯವಾಡಿದರು.

Advertisement

50:50 ಅಧಿಕಾರ ಹಂಚಿಕೆ
ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ಅವರ ಶಿವಸೇನೆ ಮತ್ತು ಶರದ್‌ ಪವಾರ್‌ ಅವರ ಎನ್‌ಸಿಪಿ ನಡುವೆ 50:50 ಅಧಿಕಾರ ಹಂಚಿಕೆಗೆ ಮಾತುಕತೆಗಳು ನಡೆದಿದ್ದು, ಎರಡು ಪಕ್ಷಗಳು ಇದಕ್ಕೆ ಒಪ್ಪಿಗೆ ನೀಡಿವೆ ಎಂಬ ಮಾತುಗಳು ಕೇಳಿಬಂದಿವೆ.
ಇದೇ ಒಪ್ಪಂದವನ್ನೇ ಮುಂದಿಟ್ಟುಕೊಂಡು ಬಿಜೆಪಿ ಜತೆ ಸಖ್ಯ ಮುರಿದುಕೊಂಡಿರುವ ಶಿವಸೇನೆ, ಎನ್‌ಸಿಪಿ ಜತೆಗೆ ಈ ರೀತಿಯ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ಹೇಳಿವೆ. ತಲಾ ಎರಡೂವರೆ ವರ್ಷ ಸಿಎಂ ಪದವಿ ಮತ್ತು ಕಾಂಗ್ರೆಸ್‌ಗೆ ಐದೂ ವರ್ಷ ಡಿಸಿಎಂ ಪದವಿ ನೀಡುವ ಬಗ್ಗೆ ಮಾತುಕತೆಗಳಾಗಿವೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಹೇರಿಕೆ ಮಾಡಲಾಗಿದ್ದರೂ, ಸರ್ಕಾರ ರಚನೆಯ ಮಾತುಕತೆಗಳು ಮಾತ್ರ ನಿಂತಿಲ್ಲ. ಈ ಬಗ್ಗೆ ಮೂರು ಪಕ್ಷಗಳು ಒಮ್ಮತಕ್ಕೆ ಬಂದ ಕೂಡಲೇ ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಉದ್ಧವ್‌-ಕಾಂಗ್ರೆಸ್‌ ನಾಯಕರ ಭೇಟಿ
ಸರ್ಕಾರ ರಚನೆಯ ಯತ್ನಗಳು ಮುಂದುವರಿದಿರುವ ಭಾಗವಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಕಾಂಗ್ರೆಸ್‌ ನಾಯಕರ ಜತೆ ಹೊಟೇಲ್‌ವೊಂದರಲ್ಲಿ ಮಾತುಕತೆ ನಡೆಸಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ಮಾನಿಕ್‌ರಾವ್‌ ಥಾಕರೆ, ಮಾಜಿ ಮುಖ್ಯಮಂತ್ರಿ ಅಶೋಕ್‌ ಚವಾಣ್‌ ಭಾಗವಹಿಸಿದ್ದ ಈ ಸಭೆಯಲ್ಲಿ ಮುಂದಿನ ಬೆಳವಣಿಗೆಗಳ ಕುರಿತು ಚರ್ಚಿಸಲಾಗಿದೆ. ಅಲ್ಲದೆ, ಕಾಂಗ್ರೆಸ್‌ ಮತ್ತು ಎನ್‌ಸಿಪಿ ಕನಿಷ್ಠ ಸಾಮಾನ್ಯ ಕಾರ್ಯಕ್ರಮವನ್ನು ರೂಪಿಸಲಿದ್ದು, ಈ ಬಗ್ಗೆಯೂ ಸೇನೆ ನಾಯಕರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಸಂಬಂಧ ಮಾತನಾಡಿದ ಉದ್ಧವ್‌ ಠಾಕ್ರೆ, ಮಾತುಕತೆ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ ಎಂದಿದ್ದಾರೆ.

ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕಾಗಿ ಐವರ ಸಮಿತಿ
ಸರ್ಕಾರ ರಚನೆಯ ಭಾಗವಾಗಿ ಶರದ್‌ ಪವಾರ್‌ ಅವರ ಎನ್‌ಸಿಪಿ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲು ಸಲುವಾಗಿ ಐವರು ನಾಯಕರ ಸಮಿತಿಯೊಂದನ್ನು ರಚಿಸಿದೆ. ಇದರಲ್ಲಿ ಜಯಂತ್‌ ಪಾಟೀಲ್‌, ಅಜಿತ್‌ ಪವಾರ್‌, ಛಗನ್‌ ಭುಜ್‌ಬುಲ್‌, ಧನಂಜಯ ಮುಂಡೆ ಮತ್ತು ನವಾಬ್‌ ಮಲಿಕ್‌ ಇದ್ದಾರೆ.

“ಮಹಾರಾಷ್ಟ್ರ ಸೇವಕ್‌’
ಇದುವರೆಗೆ ಮಹಾರಾಷ್ಟ್ರದ ಹಂಗಾಮಿ ಸಿಎಂ ಆಗಿದ್ದ ದೇವೇಂದ್ರ ಫ‌ಡ್ನವೀಸ್‌, ಟ್ವಿಟರ್‌ನಲ್ಲಿ ತಮ್ಮ ಹೆಸರನ್ನು ಮಹಾರಾಷ್ಟ್ರದ ಸೇವಕ್‌ ಎಂದು ಬದಲಾವಣೆ ಮಾಡಿಕೊಂಡಿದ್ದಾರೆ. ಚುನಾವಣೆ ನಂತರ ತಮ್ಮ ಟ್ವಿಟರ್‌ ಖಾತೆಯಲ್ಲಿ “ಉಸ್ತುವಾರಿ ಸಿಎಂ’ ಎಂದು ಬರೆದುಕೊಂಡಿದ್ದ ಅವರು, ಈಗ “ಮಹಾರಾಷ್ಟ್ರ ಸೇವಕ್‌’ ಎಂದು ಬದಲಿಸಿಕೊಂಡಿದ್ದಾರೆ.

ಈ ಮಧ್ಯೆ, ಶಿವಸೇನೆ ಜತೆಗೆ ಸರ್ಕಾರ ರಚಿಸಲು ಹೊರಟಿರುವ ಕಾಂಗ್ರೆಸ್‌ ಅನ್ನು ಟೀಕಿಸಿರುವ ಬಿಜೆಪಿ, ನಿಮ್ಮ ಕಾಮನ್‌ ಮಿನಿಮಮ್‌ ಪ್ರೋಗ್ರಾಮ್‌ ಏನು ಎಂದು ಪ್ರಶ್ನಿಸಿದೆ. ಹಿಂದುತ್ವವೇ ನಿಮ್ಮ ಸಾಮಾನ್ಯ ಕನಿಷ್ಠ ಕಾರ್ಯಕ್ರಮವೇ ಎಂದು ಅದು ವ್ಯಂಗ್ಯವಾಡಿದೆ. ಇದಕ್ಕೆ ಮಾಜಿ ಕೇಂದ್ರ ಸಚಿವ, ಶಿವಸೇನೆ ನಾಯಕ ಅರವಿಂದ್‌ ಸಾವಂತ್‌ ತಿರುಗೇಟು ನೀಡಿದ್ದು, ನೀವು(ಬಿಜೆಪಿ) ನಿತೀಶ್‌ಕುಮಾರ್‌ ಮತ್ತು ಮೆಹಬೂಬಾ ಮುಫ್ತಿ ಜೊತೆ ಹೇಗೆ ಸರ್ಕಾರ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಸಂಜಯ್‌ ರಾವುತ್‌ ಬಿಡುಗಡೆ
ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಶಿವಸೇನೆ ನಾಯಕ ಸಂಜಯ್‌ ರೌತ್‌, ಡಿಸಾcರ್ಜ್‌ ಆಗಿದ್ದಾರೆ. ಈ ವೇಳೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಮೂರು ಬಾರಿ ಅಗ್ನಿ ಪಥ ಎಂದು ಬರೆದುಕೊಂಡಿರುವ ಅವರು, ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಶಿವಸೇನೆಯವರೇ ಮುಂದಿನ ಸಿಎಂ ಎಂದು ಮತ್ತೂಮ್ಮೆ ಪುನರುಚ್ಚರಿಸಿದ್ದಾರೆ.

ಸುಪ್ರೀಂನಲ್ಲಿ ಅರ್ಜಿ ಸಲ್ಲಿಸದ ಶಿವಸೇನೆ
ರಾಜ್ಯಪಾಲರ ಆಳ್ವಿಕೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ತುರ್ತು ಅರ್ಜಿ ಸಲ್ಲಿಸಲು ಮುಂದಾಗಿದ್ದ ಶಿವಸೇನೆ, ಹಿಂದಡಿ ಇಟ್ಟಿದೆ. ರಾಜ್ಯಪಾಲರ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಶಿವಸೇನೆ ನಾಯಕರು, ಸುಪ್ರೀಂನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದರು. ಆದರೆ, ಬುಧವಾರ ಬೆಳಗ್ಗೆ ತಮ್ಮ ನಿರ್ಧಾರ ಬದಲಿಸಿತು. ಈ ಬಗ್ಗೆ ಮಾತನಾಡಿದ ಶಿವಸೇನೆ ಪರ ವಕೀಲರು, ನಾವು ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಅರ್ಜಿ ಸಲ್ಲಿಸಿಲ್ಲ, ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next