Advertisement

ಅರೆ ಬರೆ ಕಾಮಗಾರಿ; ತರಿಸುತ್ತಿದೆ ಮಳೆಗಾಲದ ಆತಂಕ!

02:13 AM May 11, 2019 | Sriram |

ಮಹಾನಗರ: ವಾಡಿಕೆಯಂತೆ ಮುಂಗಾರು ಆಗಮನಕ್ಕೆ ಇನ್ನು ಮೂರು ವಾರವಷ್ಟೇ ಬಾಕಿ ಉಳಿದ್ದು, ಮಳೆಗಾಲ ವನ್ನು ಎದುರಿಸುವುದಕ್ಕೆ ನಗರ ಕೂಡ ಸಕಲ ರೀತಿಯಿಂದಲೂ ಸಜ್ಜಾಗಬೇಕಾಗಿದೆ. ಆದರೆ ವಾಸ್ತವದಲ್ಲಿ ನಗರದ ಕೆಲವೆಡೆ ಚರಂಡಿ, ನೀರಿನ ಪೈಪ್‌ಲೈನ್‌, ರಸ್ತೆ ರಿಪೇರಿ ಸಹಿತ ಪ್ರಮುಖ ಕಾಮಗಾರಿಗಳು ಅರೆಬರೆ ಯಾಗಿ, ನಿಧಾನಗತಿಯಲ್ಲಿ ಸಾಗುತ್ತಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿದೆ.

Advertisement

ಇಂತಹ ಅಪಾಯದ ಸ್ಥಳಗಳ ಬಗ್ಗೆ “ಸುದಿನ’ ಭೇಟಿ ನೀಡಿ ಪರಿಶೀಲಿಸಿದೆ. ಕೆಲವು ಕಡೆ ಕಾಮಗಾರಿ ಅರ್ಧ ಆಗಿ ತಿಂಗಳುಗಳೇ ಕಳೆದರೆ; ಇನ್ನೂ ಕೆಲವೆಡೆ ಕಾಮಗಾರಿ ನಡೆ ಯುತ್ತಲೇ ಇದೆ; ಮತ್ತೂ ಕೆಲವೆಡೆ ಆದ ಕಾಮಗಾರಿಯೇ ಮಳೆಗಾಲಕ್ಕೆ ಭಯ ತರಿಸುವ ಸ್ಥಿತಿಯಲ್ಲಿದೆ!

ಉರ್ವ ಸರ್ಕಲ್‌-ಅಶೋಕನಗರ; ಅಪಾಯದ ಮುನ್ಸೂಚನೆ
ಕುದ್ರೋಳಿ ಭಾಗದಿಂದ ಮುಲ್ಲಕಾಡುವಿನ ತ್ಯಾಜ್ಯನೀರು ಸಂಸ್ಕರಣ ಘಟಕಕ್ಕೆ ಹೊಸದಾಗಿ ಪೈಪ್‌ಲೈನ್‌ ಹಾಕುವ ಕಾಮಗಾರಿ ಸದ್ಯ ಉರ್ವ ಸರ್ಕಲ್‌ನಿಂದ ಅಶೋಕ್‌ನಗರ ಭಾಗದಲ್ಲಿ ಪಾಲಿಕೆಯಿಂದ ನಡೆಯುತ್ತಿದೆ. ಒಂದು ತಿಂಗಳಿನಿಂದ ಕಾಮಗಾರಿ ನಡೆಸಲಾಗುತ್ತಿದೆ. ಕಾಂಕ್ರೀಟ್‌ ಕಟ್ಟಿಂಗ್‌ ಸದ್ಯ ನಡೆಯುತ್ತಿದೆ. ಇದೆಲ್ಲ ಕಾಮಗಾರಿ ಮುಗಿಸಲು ಇನ್ನೂ ಕೆಲವು ದಿನ ಕಾಯಬೇಕು. ಆದರೆ, ಕೆಲವೇ ದಿನ ಗಳಲ್ಲಿ ಮಳೆ ಎದುರಾದರೆ ಇಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.

ಲಾಲ್‌ಬಾಗ್‌ ಕಾಮಗಾರಿ ಪೂರ್ಣಗೊಳ್ಳಲಿ
ಉರ್ವಸ್ಟೋರ್‌ನಿಂದ ಪಿವಿಎಸ್‌ ವೃತ್ತ ದವರೆಗಿನ ರಸ್ತೆ ವಿಸ್ತರಣೆ, ಕಾಂಕ್ರೀಟ್‌ ಕಾಮಗಾರಿ ನಡೆದು ದಶಕವಾದರೂ ಇನ್ನೂ ಫುಟ್‌ಪಾತ್‌, ಚರಂಡಿ ಕಾಮ ಗಾರಿಗಳು ಮುಗಿದಿರಲಿಲ್ಲ. ಇದೀಗ ಆರಂಭವಾಗಿದೆ. ಆದರೆ, ಲೇಡಿಹಿಲ್‌ ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿ ಅವೈಜ್ಞಾನಿಕ ಎಂಬ ದೂರು ಕೇಳಿಬಂದಿದೆ. ಕೆಲವೇ ದಿನಗಳಲ್ಲಿ ಮಳೆ ಬಂದರೆ ನೀರು ಹರಿಯಲು ಜಾಗವಿಲ್ಲದೆ, ಲಾಲ್‌ಬಾಗ್‌ ಭಾಗದಲ್ಲಿ ರಸ್ತೆಯಲ್ಲಿಯೇ ನೀರು ಹರಿಯುವ ಸಾಧ್ಯತೆಯಿದೆ.

ಕರಂಗಲ್ಪಾಡಿಯಲ್ಲಿ
ಅರೆ ಬರೆ ಕಾಮಗಾರಿ
ಕರಂಗಲ್ಪಾಡಿ ರಸ್ತೆಯದ್ದು ಮತ್ತೂಂದು ಕಥೆ. ಇಲ್ಲಿ ಮೊದಲು ಚರಂಡಿ ವ್ಯವಸ್ಥೆಯೇ ಇರಲಿಲ್ಲ. ನೀರು ರಸ್ತೆಯಲ್ಲಿಯೇ ಹರಿಯುತ್ತಿತ್ತು. ಆದರೆ ಇತ್ತೀಚೆಗೆ ಈ ರಸ್ತೆಯ ಒಂದು ಬದಿಯಲ್ಲಿ ಚರಂಡಿ ಕಾಮಗಾರಿ ನಡೆಸಲಾಯಿತಾದರೂ ಅದು ಅರ್ಧದಲ್ಲಿದೆ.

Advertisement

ಒಂದೆರಡು ವಿದ್ಯುತ್‌ ಕಂಬ ಇಲ್ಲಿ ಸ್ಥಳಾಂತರವೂ ಬಾಕಿ ಇದೆ. ಹೀಗಾಗಿ ಕಂಬವನ್ನು ಇಟ್ಟುಕೊಂಡೆ ಅತ್ತಿಂದಿತ್ತ ಕಾಮಗಾರಿ ನಡೆಸಲಾಗಿದೆ. ಕೆಲವು ತಿಂಗಳಿನಿಂದ ಇಲ್ಲಿ ಇದೇ ಪರಿಸ್ಥಿತಿ ಇದೆ. ಹೊಸದಾಗಿ ಭೂಸ್ವಾಧೀನ ಕೂಡ ಆಗಬೇಕಾದ ಕಾರಣಕ್ಕೆ ಸಮಸ್ಯೆ ಆಗಿದೆ ಎನ್ನಲಾಗಿದೆ. ಮಳೆ ಬಂದರೆ ಇಲ್ಲಿನ ಪರಿಸ್ಥಿತಿ ಹೇಳತೀರದು.

ಪಂಪ್‌ವೆಲ್ ಸಮಸ್ಯೆಗೆ ಇನ್ನೊಂದು ಸೇರ್ಪಡೆ
ಪಂಪ್‌ವೆಲ್ ಪ್ಲೈಓವರ್‌ ಕಾಮಗಾರಿಯೇ ದೊಡ್ಡ ಸಮಸ್ಯೆ. ಇದಕ್ಕೆ ಈಗ ಸೇರ್ಪಡೆ ಇಲ್ಲಿನ ತೋಡು ಚರಂಡಿಗಳು. ಈ ವ್ಯಾಪ್ತಿಯಲ್ಲಿ ದೊಡ್ಡ ತೋಡು/ಚರಂಡಿ ಇರುವುದರಿಂದ ಪ್ಲೈಓವರ್‌ಗೆ ಪೂರಕವಾಗಿ ಕೆಲವು ಕಾಮಗಾರಿ ಕೈಗೊಂಡ ಹಿನ್ನೆಲೆಯಲ್ಲಿ ಮಳೆ ನೀರು ಹರಿಯಲು ಸಮಸ್ಯೆ ಆಗುವ ಸಾಧ್ಯತೆಯಿದೆ. ಜತೆಗೆ ಫ್ಲೈಓವರ್‌ನ ಕೆಳಭಾಗದಲ್ಲಿ ನೀರು ನಿಲ್ಲುವ ಅಪಾಯವೂ ಇದೆ. ಮಂಗಳೂರಿನ ಸಿಟಿ ಆಸ್ಪತ್ರೆಯ ಮುಂಭಾಗದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಸದ್ಯ ಮಳೆ ಬಂದರೆ ಇಲ್ಲೂ ಸಮಸ್ಯೆ ಇಲ್ಲ ಎನ್ನುವಂತಿಲ್ಲ.

ಕಂಕನಾಡಿಯಲ್ಲಿ ಬಾಯ್ತೆರೆದ ಹೊಂಡ
ಕಂಕನಾಡಿಯ ಫಾದರ್‌ ಮುಲ್ಲರ್‌ ಆಸ್ಪತ್ರೆಯ ಮುಂಭಾಗದಲ್ಲಿರುವ ರಿಕ್ಷಾ ಪಾರ್ಕ್‌ ಸಮೀಪ ಬೃಹತ್‌ ಹೊಂಡ ತೆಗೆದು ಅದನ್ನು ಮುಚ್ಚದೆ ಕೆಲವು ತಿಂಗಳಿನಿಂದ ಹಾಗೆಯೇ ಬಿಡಲಾಗಿದೆ. ಇದು ಅಪಾಯ ಆಹ್ವಾನಿಸಿದಂತಿದೆ. ನೀರಿನ ಪೈಪ್‌ಲೈನ್‌ಗಾಗಿ ಪಾಲಿಕೆಯವರು ಹೊಂಡ ಮಾಡಿ ಅದರ ಮಣ್ಣನ್ನು ರಸ್ತೆಯ ಬದಿಯಲ್ಲಿ ಹಾಕಿ ಸಮಸ್ಯೆ ಸೃಷ್ಟಿಸಿದ್ದಾರೆ. ಇದೀಗ ಹೊಂಡ ಭರ್ತಿ ಮಾಡದೆ ಹೋಗಿದ್ದಾರೆ. ಮುಂದಿನ ಮಳೆಗಾಲಕ್ಕೆ ಇದು ಅಪಾಯದ ಸೃಷ್ಟಿಸುವ ಸಾಧ್ಯತೆಯಿದೆ.

ಕೆಎಸ್‌ಆರ್‌ಟಿಸಿ ಬಿಜೈ ವ್ಯಾಪ್ತಿಯಲ್ಲಿ ಸಮಸ್ಯೆ
ಕೆಎಸ್‌ಆರ್‌ಟಿಸಿಯಿಂದ ಬಿಜೈ ಭಾಗದ ಎರಡೂ ಪಾರ್ಶ್ವದಲ್ಲಿ ಚರಂಡಿ ಕಾಮಗಾರಿ ಕೆಲವು ತಿಂಗಳಿನಿಂದ ನಡೆಯುತ್ತಲೇ ಇದೆ. ಅಲ್ಲಲ್ಲಿ ಹೊಂಡ ತೆಗೆದು ಕಾಮಗಾರಿ ನಡೆಸಲಾಗುತ್ತಿದೆ. ಸದ್ಯದ ಪರಿಸ್ಥಿಯಿಯಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಕೆಲವು ದಿನ ಕಾಯಬೇಕು.

ಅಂಗಡಿ ಮುಂಭಾಗವೆಲ್ಲ ಹೊಂಡ ತುಂಬಿಕೊಂಡಿದೆ. ಈ ಮಧ್ಯೆ ಬಿಜೈ ಸರ್ಕಲ್ನಿಂದ ಬಿಜೈ ಚರ್ಚ್‌ಗೇಟ್ವರೆಗೆ ಕಾಮಗಾರಿ ನಡೆಸಿದ ಅನಂತರ ಮಣ್ಣನ್ನು ಸುರಿದ ಪರಿಣಾಮ, ಮಳೆಗೆ ಕೆಸರು ನೀರು ಇಲ್ಲಿ ಗ್ಯಾರಂಟಿ. ಈ ಮಧ್ಯೆ ಇಲ್ಲೇ ಇದ್ದ ಚರಂಡಿಗೆ ಮಣ್ಣು ತುಂಬಿಸಿ ಮುಂದೆ ಮಳೆ ನೀರು ಹರಿಯುವುದು ಹೇಗೆ ಎಂಬುದೇ ಪ್ರಶ್ನೆ.

ರಾಜಕಾಲುವೆ, ಚರಂಡಿ ಹೂಳು-ಸವಾಲು
ಕಳೆದ ವರ್ಷ ಮೇ 29ರಂದು ಸುರಿದ ಭಾರೀ ಮಳೆಯ ಪರಿಣಾಮ ನಗರ ಅಕ್ಷರಶಃ ನೀರಿನಿಂದ ಆವೃತ್ತವಾಗಿತ್ತು. ರಾಜಕಾಲುವೆ, ತೋಡು, ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ವಿವಿಧಡೆ ನೀರಿನಿಂತು ಸಮಸ್ಯೆ ಅನುಭವಿಸುವಂತಾಗಿತ್ತು. ಸದ್ಯ ಕೆಲವು ರಾಜಕಾಲುವೆ/ಚರಂಡಿಗಳ ಹೂಳು ತೆಗೆಯಲಾಗಿದ್ದರೂ ಎಲ್ಲ ಕಡೆಗಳಲ್ಲಿ ಆಗಿಲ್ಲ ಎಂಬ ದೂರುಗಳಿವೆ. ಹೀಗಾಗಿ ಕಳೆದ ಮಳೆಯ ಸಂದರ್ಭ ಹೆಚ್ಚು ಅನಾಹುತ ಸೃಷ್ಟಿಸಿದ ಪ್ರದೇಶಗಳನ್ನು ಮುಖ್ಯ ನೆಲೆಯಲ್ಲಿಟ್ಟು, ಉಳಿದ ಸ್ಥಳಗಳನ್ನು ಅವಲೋಕಿಸಿ ಪಾಲಿಕೆ ಕ್ರಮ ವಹಿಸುವುದು ತುರ್ತು ಅಗತ್ಯ.

ಅಧಿಕಾರಿಗಳು ಎಚ್ಚರ ವಹಿಸಲಿ
ನಗರದ ರಾಜಕಾಲುವೆಗಳು, ಬೃಹತ್‌ ಚರಂಡಿಗಳು, ಒಂದು ಮೀ. ಅಗಲದ ಚರಂಡಿಗಳಲ್ಲಿ ತುಂಬಿರುವ ಹೂಳು ತ್ಯಾಜ್ಯವನ್ನು ಸ್ವತ್ಛ ಮಾಡುವ ಪ್ರಕ್ರಿಯೆ ನಡೆಸಬೇಕು. ನಗರದ ವಿವಿಧ ಭಾಗದಲ್ಲಿ ಕಾಮಗಾರಿಯ ನೆಪದಲ್ಲಿ ಹೊಂಡ ಗುಂಡಿ ಮಾಡಲಾಗಿದೆ. ಇದನ್ನು ತತ್‌ಕ್ಷಣವೇ ಅಧಿಕಾರಿಗಳು ಪರಿಶೀಲಿಸಿ ಕ್ರಮಕೈಗೊಳ್ಳಬೇಕು.
– ಡಿ. ವೇದವ್ಯಾಸ ಕಾಮತ್‌, ಶಾಸಕರು

 ಕಾಮಗಾರಿ ಪೂರ್ಣಕ್ಕೆ ಸೂಚನೆ
ರಾಜಕಾಲುವೆ, ಚರಂಡಿ ಹೂಳು ತೆಗೆಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ನಗರದಲ್ಲಿ ಅರ್ಧದಲ್ಲಿ ಉಳಿದಿರುವ ಕಾಮಗಾರಿಗಳನ್ನು
ತತ್‌ಕ್ಷಣವೇ ಪೂರ್ಣಗೊಳಿಸಬೇಕು, ಇಲ್ಲವೇ, ಮಳೆಗಾಲಕ್ಕೆ ಆ ಭಾಗದಲ್ಲಿ ಯಾವುದೇ ಸಮಸ್ಯೆ ಆಗದಂತೆ ಸಮರ್ಪಕ ವ್ಯವಸ್ಥೆ ಮಾಡಿಕೊಡಲು ಸಂಬಂಧಪಟ್ಟ ಅಧಿಕಾರಿಗಳು, ಕಂಟ್ರಾಕ್ಟರುದಾರರಿಗೆ ಸೂಚಿಸಲಾಗಿದೆ.
 - ನಾರಾಯಣಪ್ಪ,
ಮನಪಾ ಆಯುಕ್ತರು

– ದಿನೇಶ್‌ ಇರಾ
ಚಿತ್ರ: ಸತೀಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next