ಶಿವಮೊಗ್ಗ: ಪದವಿ ವಿದ್ಯಾರ್ಥಿಗಳ ಪ್ರಥಮ ವರ್ಷದ ದ್ವಿತೀಯ ಸೆಮಿಸ್ಟರ್ ಮುಗಿಯುವ ಮುನ್ನವೇ ಮೊದಲ ಸೆಮಿಸ್ಟರ್‌ಗೆ ವೇಳಾಪಟ್ಟಿ ಬಿಡುಗಡೆಯಾಗಿದ್ದು ರಾಜ್ಯದ ಎಲ್ಲ ವಿವಿಗಳು ಇಕ್ಕಟ್ಟಿನಲ್ಲಿ ಸಿಲುಕಿವೆ.
2021-22ರ ಪ್ರಥಮ ವರ್ಷವೇ ಮುಗಿದಿಲ್ಲ. ಈ ಹಂತದಲ್ಲಿ 2022-23ರ ಪ್ರಥಮ ವರ್ಷದ ವೇಳಾಪಟ್ಟಿ ಬಿಡುಗಡೆಯಾಗಿದ್ದು ಮೊದಲ ಸೆಮಿಸ್ಟರ್, ಎರಡನೇ ಸೆಮಿಸ್ಟರ್ ಎರಡನ್ನೂ ಒಟ್ಟಿಗೆ ನಡೆಸಬೇಕಾದ ಸಂದಿಗ್ಧತೆಯಲ್ಲಿ ವಿವಿಗಳು ಸಿಲುಕಿವೆ. ಕೋವಿಡ್ ಕಾರಣಕ್ಕೆ ವಿಳಂಬವಾದ ಪದವಿ ತರಗತಿಗಳು ಹಳೇ ಅವಧಿಗೆ ಬಂದಿಲ್ಲ. ಈ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಿರುವುದರಿಂದ ಪದವಿ ವೇಳಾಪಟ್ಟಿ ಮತ್ತಷ್ಟು ವಿಳಂಬವಾಗಿದೆ. ಈ ಹಂತದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಕೋವಿಡ್‌ಗೂ ಮುನ್ನ ನಡೆಯುತ್ತಿದ್ದ ವೇಳಾಪಟ್ಟಿಯಂತೆ ಕಾಲೇಜುಗಳನ್ನು ಆರಂಭಿಸಲು ಏಕರೂಪ ಶೈಕ್ಷಣಿಕ ವೇಳಾಪಟ್ಟಿ ಜಾರಿ ಮಾಡಿದೆ.
ವಿವಿಗಳ ಸಂಕಷ್ಟ: 2022-23ರ ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ ಜು.30ರೊಳಗೆ ಪ್ರವೇಶ ಪ್ರಕ್ರಿಯೆ ಮುಗಿಸಿ ಆ.17ರಿಂದ 22ರೊಳಗೆ ತರಗತಿ ಆರಂಭಿಸುವಂತೆ ಸೂಚಿಸಲಾಗಿದೆ. ಇತ್ತ ರಾಯಚೂರು ವಿವಿಯಲ್ಲಿ ಮೊದಲನೇ ಸೆಮಿಸ್ಟರ್ ಪರೀಕ್ಷೆ ಮುಗಿದು ವಾರವೂ ಆಗಿಲ್ಲ. ಕುವೆಂಪು ವಿವಿಯಲ್ಲಿ ಜೂ.18ರಿಂದ, ಬೆಂಗಳೂರು, ಧಾರವಾಡ, ಮೈಸೂರು ವಿವಿಗಳಲ್ಲಿ ಎರಡನೇ ಸೆಮಿಸ್ಟರ್ ಆರಂಭವಾಗಿದೆ. ಒಂದು ಸೆಮಿಸ್ಟರ್ ಪೂರ್ಣಗೊಳ್ಳಲು ಕನಿಷ್ಟ ನಾಲ್ಕು ತಿಂಗಳು ಬೇಕು. ಹೊಸ ವೇಳಾಪಟ್ಟಿಯಂತೆ ಒಂದನೇ ಸೆಮಿಸ್ಟರ್ ಆರಂಭವಾದರೆ ಎರಡನೇ ಸೆಮಿಸ್ಟರ್ ಶೇ.60 ಮಾತ್ರ ಮುಗಿದಿರುತ್ತದೆ. ಕೆಲ ವಿವಿಗಳಲ್ಲಿ ಶೇ.50ರೊಳಗೆ ಸಿಲೆಬಸ್ ಮುಗಿದಿರುತ್ತದೆ.
ಸಮಸ್ಯೆಗಳೇನು?: ಹೊಸ ವೇಳಾಪಟ್ಟಿ ಯಂತೆ ತರಗತಿ ಶುರುವಾದರೆ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಈಗಾಗಲೇ ಕೊಠಡಿ ಸಮಸ್ಯೆ ಹೇಳತೀರದು. ಶಿವಮೊಗ್ಗದ ಸಹ್ಯಾದ್ರಿ, ದಾವಣಗೆರೆಯ ಸರಕಾರಿ ಪ್ರಥಮ ದರ್ಜೆ ಕಾಲೇಜು, ಚಿತ್ರದುರ್ಗ ಚಳ್ಳಕೆರೆ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ರಾಜ್ಯ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ 321 ಅನುದಾನಿತ ಕಾಲೇಜುಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಓದುತ್ತಿದ್ದು ಕೊಠಡಿ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಅತಿಥಿ ಉಪನ್ಯಾಸಕರಿಗೆ ಸಂಬಳ ಹೆಚ್ಚು ಮಾಡಿರುವುದರಿಂದ ಕಾರ್ಯಭಾರ ಹೆಚ್ಚಿಸಲಾಗಿದೆ. ಮೊದಲನೇ ಸೆಮಿಸ್ಟರ್ ಮಕ್ಕಳಿಗೆ ಹೇಗೆ ಪಾಠ ಮಾಡುತ್ತಾರೆ? ಹೆಚ್ಚುವರಿ ಅತಿಥಿ ಉಪನ್ಯಾಸಕರ ಸರಕಾರ ನೇಮಕ ಮಾಡುತ್ತದೆಯೇ? ಮಾಡಿದರೆ ಅವರಿಗೆ ಕಾರ್ಯಭಾರ ಹೇಗೆ ಹಂಚುತ್ತದೆ ಎಂಬ ಪ್ರಶ್ನೆಗಳನ್ನು ಉಪನ್ಯಾಸಕರು ಮುಂದಿಟ್ಟಿದ್ದಾರೆ. ಪ್ರಸ್ತುತ ಎನ್‌ಇಪಿ ಒಂದನೇ ಸೆಮಿಸ್ಟರ್ ಪರೀಕ್ಷೆ ಮೌಲ್ಯಮಾಪನ ಈಗಷ್ಟೇ ಆರಂಭವಾಗಿದೆ. ಈ ಹಂತದಲ್ಲಿ ಎರಡನೇ ಸೆಮಿಸ್ಟರ್ ತರಾತುರಿಯಲ್ಲಿ ಮುಗಿಸಲು ಸಾಧ್ಯವೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.
-ಶರತ್ ಭದ್ರಾವತಿ