ಇನ್ನೇನು ಸೆಮೆಸ್ಟರ್ ಪರೀಕ್ಷೆಗಳು ಮುಗಿದು ರಜೆ ಸಿಗುವ ಸಮಯ. ಒಮ್ಮೆ ಈ ಎಕ್ಸಾಮ್ ಕಾಟ ಮುಗಿದರೆ ಸಾಕು ಎಂದು ಮನಸ್ಸಲ್ಲೇ ಮಂಡಿಗೆ ಮೆಲ್ಲುವ ವಿದಾರ್ಥಿಗಳೇ ಬಹುಪಾಲು. ಪರೀಕ್ಷೆ ಇದ್ದಾಗಲೇ ಮನಸ್ಸು ಕದಡಿ ರಜೆಯನ್ನು ಮಜಾವಾಗಿ ಕಳೆಯುವ ಲೆಕ್ಕಾಚಾರ ಆಗಿರುತ್ತದೆ. ಎಲ್ಲೆಲ್ಲಿ ಟೂರ್ ಹೋಗಬೇಕು? ಯಾವ ಫಂಕ್ಷನ್ ಎಟೆಂಡ್ ಆಗಬೇಕು? ಎಲ್ಲಿ ಯಾವ ರೀತಿ ಎಂಜಾಯ್ ಮಾಡಬೇಕು? ಎಷ್ಟರ ಮಟ್ಟಿಗೆ ಯೋಜನೆ ಸಿದ್ಧವಾಗಿರುತ್ತದೆ ಅಂದರೆ ಪರೀಕ್ಷಾ ಸಮಯದಲ್ಲೇ ಒಂದು ತಿಂಗಳ ಪಟ್ಟಿ ರೆಡಿಯಾಗಿರುತ್ತದೆ. ಕಾಲೇಜಿಗೆ, ಪರೀಕ್ಷೆಗೆ, ಜೀವನದ ಹಾದಿಗೆ ಒಂದಿನಿತೂ ಆಲೋಚನೆ ಮಾಡದ ಯುವಕ-ಯುವತಿಯರು ರಜೆಗಾಗಿ ಯಾವತ್ತೂ ಪಕ್ಕಾ ಪ್ಲಾನ್ !
ನಾಲ್ಕು ತಿಂಗಳ ಬೋರಿಂಗ್ ಕ್ಲಾಸ್ ಗಳು, ಎಕ್ಸಾಮ್ ತಯಾರಿ, ಅರ್ಥವಾಗದ ಪ್ರಶ್ನಾಪತ್ರಿಕೆಯಿಂದ ದೂರ ಹೋಗಲು ಅನೇಕ ವಿದ್ಯಾರ್ಥಿಗಳು ತಮ್ಮದೇ ಲೆಕ್ಕಾಚಾರ ಹಾಕಿಕೊಂಡಿರುತ್ತಾರೆ. ಆದರೆ, ಸೆಮೆಸ್ಟರ್ ರಜೆಯನ್ನು ಉಪಯುಕ್ತಗೊಳಿಸಿ, ಭವಿಷ್ಯಕ್ಕೊಂದು ಸುಂದರ ಮಾರ್ಗ ರೂಪಿಸಲು ಇಲ್ಲಿದೆ ನೋಡಿ ಸರಳ ಯೋಜನೆ:
ರೆಸ್ಯೂಮೆ ತಯಾರಿ: ಮೊತ್ತ ಮೊದಲು ಒಬ್ಬ ವಿದ್ಯಾರ್ಥಿಯ ಮುಂದೆ ಗುರಿಯಿರಬೇಕು. ತಾನು ಏನಾಗಬೇಕು? ಅದಕ್ಕೆ ತಕ್ಕ ಹಾಗೆ ಯಾವ ಶಿಕ್ಷಣ ಪಡೆಯಬೇಕು, ತಯಾರಿ ಹೇಗೆ ಮಾಡಬೇಕು ಎನ್ನುವುದು ಮುಖ್ಯ. ಅದೆಷ್ಟೋ ಬಾರಿ ಗೊತ್ತು ಗುರಿಯಿಲ್ಲದ ಶಿಕ್ಷಣ ಜೀವನವಿಡೀ ಶಿಕ್ಷೆಯಾದದ್ದೂ ಇದೆ. ಹಾಗಾಗಿ, ಪ್ರಥಮದಲ್ಲಿ ರೆಸ್ಯೂಮೆಯೊಂದನ್ನು ತಯಾರಿಸಿದ್ದಲ್ಲಿ ಅದೇ ಮುಂದಕ್ಕೆ ಗುರಿ ಮುಟ್ಟಿಸುವಲ್ಲಿ ಸಹಾಯ ಮಾಡುತ್ತದೆ. ರೆಸ್ಯೂಮೆಯಲ್ಲಿ ಏನೇನಿರಬೇಕು, ನಾನೇನು ಮಾಡಬೇಕು ಎನ್ನುವುದನ್ನು ಮೊದಲು ಲೆಕ್ಕ ಹಾಕಿಕೊಳ್ಳಬೇಕು.
ಕಂಪ್ಯೂಟರ್ ತರಬೇತಿ: ಅದೆಷ್ಟೋ ಬಾರಿ ವಿದ್ಯಾರ್ಥಿಗಳು ಎಡವುದು ಸಮಯವನ್ನು ಸರಿಯಾಗಿ ಬಳಸಿಕೊಳ್ಳದೆ. ಕ್ಯಾಂಪಸ್‌ನಲ್ಲಿ ಉದ್ಯೋಗ ದೊರೆಯಬೇಕೆಂದಾದಲ್ಲಿ ಕಂಪ್ಯೂಟರ್ ಅನುಭವ ಬೇಕೇಬೇಕು. ಕಂಪ್ಯೂಟರ್ ಬಳಕೆಯ ಜ್ಞಾನ ಇಂದಿಗೆ ಸಾಲುತ್ತಿಲ್ಲ. ಹಾಗಾಗಿ, ಸೆಮೆಸ್ಟರ್ ರಜೆಯಲ್ಲೊಂದು ಕೋರ್ಸ್ ಮಾಡಿ ಪ್ರಮಾಣಪತ್ರ ಇಟ್ಟುಕೊಳ್ಳುವುದು ಜಾಣರ ಲಕ್ಷಣ.
ಇಂಟರ್ನ್ ಶಿಪ್ : ಇತ್ತೀಚೆಗೆ ಕಂಪೆನಿಗಳು ವಿದ್ಯಾರ್ಥಿಗಳ ಕೆಲಸ ಮಾಡಿದ ಅನುಭವವನ್ನೂ ಕೇಳುತ್ತಾರೆ. ಶಿಕ್ಷಣದ ಗುಣಮಟ್ಟ ಹೇಗೇ ಇರಲಿ, ಹಲವು ಕಂಪೆನಿಗಳಲ್ಲಿ ಇಂಟರ್ನ್ಶಿಪ್ ಮಾಡಿದ ಅನುಭವದ ಮೇಲೂ ಅನೇಕ ಬಾರಿ ಒಳ್ಳೆಯ ಉದ್ಯೋಗ ಸಿಗುವುದಿದೆ. ಇಂಟರ್ನ್ ಶಿಪ್‌ಗೆ ಆಯ್ಕೆ ಮಾಡುವಾಗಲೂ ಜಾಗರೂಕರಾಗಿರಬೇಕು. ತಮ್ಮ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಷಯಗಳ ಮೇಲೆಯೇ ಇಂಟರ್ನ್ಶಿಪ್ ಮಾಡಿದರೆ ಉತ್ತಮ. ಕೆಲವೊಂದು ಕಂಪೆನಿಗಳು ಒಂದು ತಿಂಗಳ ಕಲಿಕೆಯೊಂದಿಗೆ ಸ್ವಲ್ಪಮಟ್ಟಿಗೆ ಸಂಬಳದ ರೂಪದಲ್ಲಿ ಹಣವನ್ನೂ ನೀಡುತ್ತವೆ.
ಕೌಶಲ ಪರಿಣತಿ: ಡಿಗ್ರಿ ಕೆಲವೊಬ್ಬರಿಗೆ ಬರಿಯ ಪ್ರಮಾಣಪತ್ರವಷ್ಟೇ. ಅಂಥವರು ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ರಜಾಸಮಯವನ್ನು ಕಳೆಯುವುದು ಒಳ್ಳೆಯದು. ಒಂದು ತಿಂಗಳ ಕೌಶಲಾಭಿವೃದ್ಧಿ ತರಬೇತಿ ವಿದ್ಯಾರ್ಥಿಯ ಜೀವನಪಥವನ್ನು ಬದಲಿಸಿದ್ದೂ ಇದೆ. ಒಬ್ಬ ಒಳ್ಳೆಯ ಗಾಯಕ, ಚಿತ್ರಕಾರ, ಡ್ಯಾನ್ಸರ್, ಛಾಯಾಚಿತ್ರಗಾರ, ಫ್ಯಾಶನ್ ಡಿಸೈನರ್ ಮೂಡಿಬರಲು ತರ ಬೇತಿ ಅಗತ್ಯ.
ಅಗತ್ಯ ಪತ್ರಗಳ ತಯಾರಿ: ಇಂದು ಎಲ್ಲದ ಕ್ಕೂ ದಾಖಲೆಗಳನ್ನು ಕೇಳುವ ಸಮಯ. ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಕಾರ್ಡ್, ಪಾಸ್‌ಪೋರ್ಟ್ ಹೀಗೆ ಅಗತ್ಯ ದಾಖಲೆಪತ್ರಗಳನ್ನು ರಜಾ ಸಮಯದಲ್ಲಿ ಮಾಡಿಡುವುದು ಉತ್ತಮ. ಎಲ್ಲಾ ದಾಖಲೆ ಪ್ರತಿಗಳು ಸರಿಯಾಗಿದ್ದಷ್ಟು ಉದ್ಯೋಗದ ಖಾತ್ರಿಯ ಹಾದಿ ಸುಲಭ. ಹೆಚ್ಚಿನ ಕಡೆಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಕೇಳುತ್ತಾರೆ.
ಮೇಲೆ ತಿಳಿಸಿದ ಪಂಚಸೂತ್ರಗಳು ಸೆಮಿರ್ಸ್ಟ ರಜೆಯನ್ನು ಉಪಯುಕ್ತವಾಗಿ ಹೇಗೆ ಯೋಜಿಸಬಹುದೆಂದು ಮಾದರಿ. ನಿರ್ದಿಷ್ಟ ಗುರಿಯಿರುವ ವಿದ್ಯಾರ್ಥಿಗಳು ಪೂರ್ತಿ ದಿನವನ್ನು ಹೇಗೆ ಕಳೆಯಬೇಕೆಂಬುದನ್ನು ಪಟ್ಟಿ ಮಾಡಿಡುತ್ತಾರೆ.
ಅಶೋಕ್ ಕೆ. ಜಿ. ಮಿಜಾರ್
ವಾಣಿಜ್ಯಶಾಸ್ತ್ರ ಉಪನ್ಯಾಸಕ, ಆಳ್ವಾಸ್ ಕಾಲೇಜು, ಮೂಡುಬಿದಿರೆ